
ಬೈಂದೂರು ಸಮೀಪದ ಬಾಡಾ ಗ್ರಾಮದ ಬಡಕೆರೆ ರೈಲು ಹಳಿಯ ಬಳಿ ಆಹಾರ ಅರಸಲು ಬಂದಿದ್ದ ಕರಿ ಚಿರತೆ ಅಪಘಾತಕ್ಕೀಡಾಗಿದೆ. ಮೃತ ಚಿರತೆ ನಾಲ್ಕು ವರ್ಷ ವಯಸ್ಸಿನದ್ದಾಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಕರಿ ಚಿರತೆಗಳು ಕುಂದಾಪುರ ಅರಣ್ಯ ಭಾಗದಲ್ಲಿ ಸಾಮಾನ್ಯವಾಗಿ ಕಂಡು ಬರೋದಿಲ್ಲ. ಈ ತರಹದ 10 ಚಿರತೆಗಳು ಈ ಅರಣ್ಯವಲಯದಲ್ಲಿ ಇರಬಹುದು. ಕೆಲ ಸಮಯದ ಹಿಂದಷ್ಟೇ ಬಾವಿಯಲ್ಲಿ ಬಿದ್ದಿದ್ದ ಎರಡು ಚಿರತೆಗಳನ್ನ ರಕ್ಷಿಸಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ರೈಲು ಅಪಘಾತದಲ್ಲಿ ಚಿರತೆ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಪ್ರಭಾಕರ್ ಕುಲಾಲ್ ಮಾಹಿತಿ ನೀಡಿದ್ರು.
ಮಂಗಳೂರು – ಮುಂಬೈ ಮಾರ್ಗದ ರೈಲು ಹಳಿಯಲ್ಲಿ ಕಪ್ಪು ಬಣ್ಣದ ಚಿರತೆಯ ಶವ ಸಿಕ್ಕಿದೆ. ರೈಲ್ವೆ ಇಲಾಖೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ.
ಇನ್ನು ಐಎಫ್ಎಸ್ ಅಧಿಕಾರಿ ಪರ್ವೀಣ್ ಕಸ್ವಾನ್ ಕೂಡ ಅಪಘಾತದ ದೃಶ್ಯಗಳನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಭಗೀರಾ ತನ್ನ ಸ್ವಂತ ಭೂಮಿಯ ಮೇಲಿದ್ದ. ಆದರೆ ಅನ್ಯಗ್ರಹದ ಯಂತ್ರವೊಂದು ಆತನನ್ನ ಕೊಲೆ ಮಾಡಿದೆ ಎಂದು ಶೀರ್ಷಿಕೆ ನೀಡಿದ್ದಾರೆ.