ಕೊರೊನಾ 2ನೆ ಅಲೆಯ ಮುನ್ಸೂಚನೆ ಇದ್ದರೂ ಸಹ ಅದನ್ನ ನಿಯಂತ್ರಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಕೋಲಾರದಲ್ಲಿ ಗುಡುಗಿದ್ದಾರೆ.
ಸರ್ಕಾರದ ನಿರ್ಲಕ್ಷ್ಯದಿಂದಾಗಿ ರಾಜ್ಯದಲ್ಲಿ ಬೆಡ್, ವೈದ್ಯಕೀಯ ಆಮ್ಲಜನಕ ಹಾಗೂ ವೆಂಟಿಲೇಟರ್ ಸಮಸ್ಯೆ ಮಿತಿಮೀರಿದೆ. ಆಕ್ಸಿಜನ್ ಸಿಗದೇ ಜನತೆ ಸಾಯುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾದಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ಚಿಕಿತ್ಸೆಯಲ್ಲಿ ಪ್ರಮುಖವಾಗಿ ಬಳಕೆಯಾಗಲ್ಪಡುವ ರೆಮಿಡಿಸಿವರ್ ಕಾಳಸಂತೆಯಲ್ಲಿ 15 ರಿಂದ 30 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಸರ್ಕಾರವೇ ರೆಮಿಡಿಸಿವರ್ ವಿತರಣೆ ಜವಾಬ್ದಾರಿ ಹೊತ್ತಿರುವಾಗ ಈ ಚುಚ್ಚುಮದ್ದು ಕಾಳಸಂತೆಗೆ ಹೋಗೋಕೆ ಹೇಗೆ ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಸಚಿವ ಸುಧಾಕರ್ ವಿರುದ್ಧವೂ ಕೆಂಡಕಾರಿದ ರಾಮಲಿಂಗಾರೆಡ್ಡಿ, ಸುಧಾಕರ್ ರಾಜ್ಯದ ಮಂತ್ರಿಯೋ ಇಲ್ಲ ಕೇವಲ ಚಿಕ್ಕಬಳ್ಳಾಪುರದ ಮಂತ್ರಿಯೋ ಎಂಬುದು ಅರ್ಥವಾಗುತ್ತಿಲ್ಲ. ಚಿಕ್ಕ ಬಳ್ಳಾಪುರದಲ್ಲಿ ಅತೀ ಹೆಚ್ಚು ಬೆಡ್ ವ್ಯವಸ್ಥೆ ಮಾಡಿ ಬೆಂಗಳೂರಿನಲ್ಲಿ ಕಡಿಮೆ ಬೆಡ್ ವ್ಯವಸ್ಥೆ ಮಾಡಿದ್ದಾರೆ. ಇನ್ನು 18 ರಿಂದ 44 ವರ್ಷದವರಿಗೆ ಕೊರೊನಾ ಲಸಿಕೆ ನೀಡುವ ವಿಚಾರದಲ್ಲಂತೂ ರಾಜ್ಯ ಸರ್ಕಾರಕ್ಕೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಅವರು ಕಿಡಿಕಾರಿದ್ರು.