ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು ವರುಣನ ಆರ್ಭಟಕ್ಕೆ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ಶಿವಾನಂದ ಸರ್ಕಲ್, ರಾಜಾಜಿನಗರ, ಯಶವಂತಪುರ, ಮಲ್ಲೇಶ್ವರಂ, ಜೆಪಿ ನಗರ, ಯಲಹಂಕ, ಮಹಾಲಕ್ಷ್ಮಿಲೇಔಟ್, ವಿಜಯನಗರ, ಶಿವಾಜಿನಗರ, ಜಯನಗರ, ಬಸವನಗುಡಿ, ಹಲಸೂರು, ಇಂದಿರಾನಗರ, ಕೆಆರ್ ಮಾರ್ಕೆಟ್, ಮೈಸೂರು ರಸ್ತೆ, ಮೆಜೆಸ್ಟಿಕ್ ಸುತ್ತಮುತ್ತ ಭಾರಿ ಮಳೆಯಾಗಿದೆ.
ಭಾರಿ ಮಳೆಯಿಂದಾಗಿ ವಾಹನ ಸವಾರರ ಪರದಾಟ ನಡೆಸುವಂತಾಗಿದೆ. ಅನೇಕ ರಸ್ತೆ, ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತಿದ್ದು, ರಸ್ತೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಇದರಿಂದಾಗಿ ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಗವಿಗಂಗಾಧರೇಶ್ವರ ದೇವಾಲಯದ ಕಾಂಪೌಂಡ್ ಕುಸಿದಿದೆ. ಲಾಲ್ಬಾಗ್ ರಸ್ತೆಯಲ್ಲಿ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದು ಟ್ರಾಫಿಕ್ ಜಾಮ್ ಆಗಿದೆ. ಹೊಸಕೆರೆಹಳ್ಳಿ ಸಮೀಪ ದತ್ತಾತ್ರೇಯ ರಸ್ತೆಗೆ ರಾಜಕಾಲುವೆಯ ನೀರು ನುಗ್ಗಿದೆ. ಮಿನರ್ವ ಸರ್ಕಲ್ ಸಮೀಪ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ
ಬೆಂಗಳೂರು ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಅದೇ ರೀತಿ ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿ ಜಿಲ್ಲೆಗಳು ಸೇರಿ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ.