ಬೆಂಗಳೂರು: ಲಾಕ್ಡೌನ್ ಕಾರಣದಿಂದ ಮದುವೆ ನಡೆಯದ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪ ಕಾಯ್ದಿರಿಸಿದ್ದವರಿಗೆ ಮುಂಗಡ ಹಣ ವಾಪಸ್ ನೀಡುವಂತೆ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಅನೇಕರು ಮುಂಗಡ ಹಣ ಪಾವತಿಸಿ ಮದುವೆಗೆ ಕಲ್ಯಾಣ ಮಂಟಪವನ್ನು ಕಾಯ್ದಿರಿಸಿದ್ದು, ಲಾಕ್ ಡೌನ್ ಜಾರಿಯಾದ ಕಾರಣ ಮದುವೆಗಳನ್ನು ರದ್ದು ಮಾಡಲಾಗಿದೆ. ಇಲ್ಲವೇ ಮನೆಯಲ್ಲಿಯೇ ಸರಳವಾಗಿ ಮದುವೆ ನಡೆಸಲಾಗಿದೆ.
ಈ ಹಿಂದೆಯೇ ಕಲ್ಯಾಣ ಮಂಟಪಗಳನ್ನು ಬುಕ್ ಮಾಡಿದ್ದರೂ, ಲಾಕ್ ಡೌನ್ ನಿಂದಾಗಿ ಮದುವೆ ನಡೆದಿಲ್ಲ. ಕೆಲವು ಕಲ್ಯಾಣ ಮಂಟಪಗಳು ಮುಂಗಡ ಹಣವನ್ನು ವಾಪಸ್ ನೀಡಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕರ್ನಾಟಕ ವಿಪತ್ತು ನಿರ್ವಹಣೆ ಕಾಯ್ದೆಯನ್ನು ಉಲ್ಲೇಖಿಸಿ ಸುತ್ತೋಲೆಯನ್ನು ಹೊರಡಿಸಿದೆ.
ಮುಂಗಡ ಹಣ ನೀಡಿ ಮದುವೆಗೆ ಕಲ್ಯಾಣ ಮಂಟಪ ಕಾಯ್ದಿರಿಸಿದ್ದು ಮದುವೆ ನಡೆಯದಿದ್ದರೆ ಕಲ್ಯಾಣ ಮಂಟಪದವರು ತೆರಿಗೆಯನ್ನು ಕಡಿತಗೊಳಿಸಿ ಬಾಕಿ ಹಣವನ್ನು ವಾಪಸ್ ನೀಡಬೇಕು. ಇಲ್ಲದಿದ್ದರೆ ಮದುವೆ ನಡೆಸಲು ಇಷ್ಟಪಟ್ಟಲ್ಲಿ ಮುಂದಿನ ದಿನಾಂಕವನ್ನು ನಿಗದಿ ಮಾಡಿಕೊಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.