
ಬೆಂಗಳೂರು: ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಜೂನ್ 18 ರಂದು ನಡೆಯಲಿದ್ದು, ಸಿದ್ಧತೆ ಪೂರ್ಣಗೊಳಿಸುವಂತೆ ಪಿಯು ಇಲಾಖೆಯಿಂದ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಸೂಚನೆ ನೀಡಲಾಗಿದೆ.
ಜೂನ್ 15 ರಿಂದ ಕಾಲೇಜಿನಲ್ಲಿ ಹಾಜರಿರುವಂತೆ ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ ತಿಳಿಸಲಾಗಿದೆ. ನಿಯೋಜಿತ ಮುಖ್ಯ ಅಧೀಕ್ಷಕರು, ಸಹ ಮುಖ್ಯ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸಬೇಕು. ಉಳಿದ ಪ್ರಾಂಶುಪಾಲರು, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ದೂರವಾಣಿ ಕರೆಮಾಡಿ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ಸುರಕ್ಷಿತ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಪರೀಕ್ಷೆಯಿಂದ ಯಾವ ವಿದ್ಯಾರ್ಥಿ ಕೂಡ ವಂಚಿತರಾಗದಂತೆ ನೋಡಿಕೊಳ್ಳಬೇಕೆಂದು ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.
ಮೌಲ್ಯಮಾಪನ ಕರ್ತವ್ಯದಲ್ಲಿರುವ ಉಪನ್ಯಾಸಕರು ನಿಯೋಜಿತ ಪರೀಕ್ಷಾ ಕೇಂದ್ರದಲ್ಲಿ ಹಾಜರಾದ ನಂತರ ಜೂನ್ 19 ರಂದು ಮೌಲ್ಯಮಾಪನಕ್ಕೆ ಹಾಜರಾಗಬೇಕು ಎಂದು ನಿರ್ದೇಶನ ನೀಡಲಾಗಿದೆ.