ತನ್ನ ಹೆತ್ತ ತಾಯಿಯನ್ನು ನಿರ್ಲಕ್ಷ್ಯ ಮಾಡಿದ ಪುತ್ರನಿಗೆ ಉಪ ವಿಭಾಗಾಧಿಕಾರಿ ನ್ಯಾಯಾಲಯ ಬಿಗ್ ಶಾಕ್ ನೀಡಿದೆ. ಇಂತಹುದೊಂದು ವಿಶೇಷ ಘಟನೆ ರಾಯಚೂರಿನಲ್ಲಿ ನಡೆದಿದ್ದು, ಪುತ್ರನಿಗೆ ಬಂದಿದ್ದ ಪಿತ್ರಾರ್ಜಿತ ಆಸ್ತಿಯನ್ನು ತಾಯಿಯ ಹೆಸರಿಗೆ ವರ್ಗಾಯಿಸುವಂತೆ ಆದೇಶ ನೀಡಲಾಗಿದೆ.
ಸಿರವಾರ ತಾಲ್ಲೂಕು ಕವಿತಾಳದ ಖತೇಜಾ ಬೇಗಂ ಎಂಬವರು, ತಮ್ಮ ಪುತ್ರ ಹುಸೇನ್ ಭಾಷಾ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಅಲ್ಲದೆ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ. ಹೀಗಾಗಿ ಪಿತ್ರಾರ್ಜಿತವಾಗಿ ಬಂದಿದ್ದ 3 ಎಕರೆ 20 ಗುಂಟೆ ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಿ ಕೊಡುವಂತೆ ಅರ್ಜಿ ಸಲ್ಲಿಸಿದ್ದರು.
2015ರಲ್ಲಿ ಹುಸೇನ್ ಭಾಷಾ ಈ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದನೆನ್ನಲಾಗಿದ್ದು, ಅರ್ಜಿಯ ವಿಚಾರಣೆ ನಡೆಸಿದ ರಾಯಚೂರು ಉಪ ವಿಭಾಗಾಧಿಕಾರಿ ಸಂತೋಷ್ ಕಾಮಗೌಡ ಅವರು, ‘ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ 2007’ ರ ಅಡಿಯಲ್ಲಿ ಹುಸೇನ್ ಭಾಷಾ ಹೆಸರಲ್ಲಿದ್ದ ಆಸ್ತಿ ನೋಂದಣಿಯನ್ನು ರದ್ದುಗೊಳಿಸಿ ತಾಯಿ ಖತೇಜಾ ಬೇಗಂ ಹೆಸರಿಗೆ ಖಾತೆ ವರ್ಗಾವಣೆ ಮಾಡಿಕೊಡುವಂತೆ ಆದೇಶ ನೀಡಿದ್ದಾರೆ.