ಕೊರೋನಾಗೆ ಆಯುರ್ವೇದ ಔಷಧ ಬಿಡುಗಡೆ ಮಾಡಬೇಕು. ಡಾ. ಗಿರಿಧರ ಕಜೆ ಅವರು ತಯಾರಿಸಿರುವ ಆಯುರ್ವೇದ ಔಷಧವನ್ನು ಬಿಡುಗಡೆ ಮಾಡದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಆಯುರ್ವೇದ ಔಷಧ ಬಿಡುಗಡೆ ಮಾಡದಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ, ಗಿರಿಧರ ಕಜೆ ಅವರಿಂದ 70 ಲಕ್ಷ ಮಾತ್ರೆ ಪಡೆದಿದೆ. ಈ ಮಾತ್ರೆಗಳನ್ನು ಎಲ್ಲಿ ಇಡಲಾಗಿದೆ? ಏಕೆ ಬಿಡುಗಡೆ ಮಾಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಶಾಪ್ ಗಳಲ್ಲಿ ಔಷಧ ಇಲ್ಲ. ಸರ್ಕಾರ, ಆಯುರ್ವೇದದ ಮಧ್ಯೆ ಅಲೋಪಥಿ ಮಾಫಿಯಾ ನಿಂತಿದೆ ಎಂದು ಆರೋಪಿಸಿದ್ದಾರೆ.
ಒಬ್ಬ ಸೋಂಕಿತನಿಗೆ 30 ಸಾವಿರ ರೂ. ಖರ್ಚು ಮಾಡುತ್ತಿದ್ದೀರಿ. ಆಯುರ್ವೇದ ಔಷಧಕ್ಕೆ 300 ರೂ. ಮಾತ್ರ ಖರ್ಚಾಗುತ್ತದೆ. ಇದನ್ನು ಸಚಿವರಾದ ಶ್ರೀರಾಮುಲು, ಡಾ. ಸುಧಾಕರ್ ತಡೆಯುತ್ತಿದ್ದಾರೆ. ಆಲೋಪಥಿ ಲಾಬಿ ನಿಮ್ಮನ್ನು ತಡೆಯುತ್ತಿವೆ ಎಂಬ ಸಂಶಯವಿದೆ. ನೀವು ಭ್ರಷ್ಟಾಚಾರಕ್ಕೆ ಒಳಗಾಗುತ್ತಿದ್ದೀರಿ ಎಂಬ ಸಂಶಯ ಬರುತ್ತಿದೆ ಎಂದು ಸಚಿವರಾದ ಶ್ರೀರಾಮುಲು ಮತ್ತು ಸುಧಾಕರ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.