ಬೆಂಗಳೂರು: ಪಶುಪಾಲಕರು ಮತ್ತು ಜಾನುವಾರು ಸಾಕಾಣೆಯಲ್ಲಿ ತೊಡಗಿಸಿಕೊಂಡವರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪಶುವೈದ್ಯ ಸೇವೆಯನ್ನು ಸಮರ್ಪಕವಾಗಿ ನಿಗದಿತ ಕಾಲ ಮಿತಿಯಲ್ಲಿ ಕೈಗೊಳ್ಳಲು ವಾರ್ ರೂಮ್ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವರ ಪ್ರಭು ಚವ್ಹಾಣ್ ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾರ್ ರೂಮ್ ಪಶುಪಾಲಕರ ಅಭಿವೃದ್ಧಿ ಮತ್ತು ಬೆಳವಣಿಗೆ ದೃಷ್ಟಿಯಿಂದ ಅನುಕೂಲವಾಗಲಿದೆ. ನಮ್ಮ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದಂತೆ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಗೋಸೇವಾ ಆಯೋಗವನ್ನು ಸಹ ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಪ್ರೋತ್ಸಾಹ ಧನ:
ಫೆಬ್ರುವರಿವರೆಗೂ ಹಾಲು ಪೂರೈಕೆದಾರರಿಗೆ ಪ್ರೋತ್ಸಾಹಧನ ನೀಡಲಾಗಿದೆ.(12,4900 ಲಕ್ಷ ರೂ.). ಮಾರ್ಚ್ ನಿಂದ ಜೂನ್ ವರೆಗೆ 53,504 ಲಕ್ಷ ರೂ. ಪ್ರೋತ್ಸಾಹ ಧನ ಡಿ.ಬಿ.ಟಿ ಮೂಲಕ ರೈತರಿಗೆ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ವಾರ್ ರೂಮ್
ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಪಶುಸಂಗೋಪನೆ ಇಲಾಖೆಯಿಂದ ವಾರ್ ರೂಮ್ ಮಾಡಲು ತಯಾರಿ ನಡೆಸಲಾಗುತ್ತಿದೆ. ಸೌಲಭ್ಯ ದಿನದ 24 ಗಂಟೆ ಲಭ್ಯವಾಗಲಿದೆ. ಟೋಲ್ ಫ್ರಿ ನಂಬರ್ ವ್ಯವಸ್ಥೆ ಇರುತ್ತದೆ. ಕರೆ ಮಾಡಿದ 4 ಗಂಟೆಯಲ್ಲಿ ಸೇವೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಕರೆ ಮಾಡಿದ ಮೊಬೈಲ್ ನಂಬರ್ ಗೆ ಎಸ್.ಎಮ್.ಎಸ್ ಮೂಲಕ ಮಾಹಿತಿ ನೀಡಲಾಗುವುದು.
ಸೇವೆ ಮತ್ತು ಕರೆಗಳ ಎಲ್ಲ ಮಾಹಿತಿ ಸಚಿವರು ಮತ್ತು ಇಲಾಖೆಯ ಕಾರ್ಯದರ್ಶಿ ಗಮನಕ್ಕೆ ತರುವ ವ್ಯವಸ್ಥೆ ಇರುತ್ತದೆ. ವಾರ್ ರೂಮ್ ಮೂಲಕ -ರೈತರಿಗೆ, ಪಶುಪಾಲಕರಿಗೆ, ಕೋಳಿ, ಕುರಿ, ಹಂದಿ ಸಾಕಾಣಿಕೆದಾರರಿಗೆ ಆರೋಗ್ಯ ಸಂಬಂಧಿ ವಿಷಯ, ಆಪ್ತ ಸಮಾಲೋಚನೆ ಮತ್ತು ಸಲಹೆ ಪಡೆದುಕೊಳ್ಳಬಹುದು. ಇದರಿಂದ ಪಶುಪಾಲನಾ ಚಟುವಟಿಕೆಗಳು ಮತ್ತಷ್ಟು ವ್ಯವಸ್ಥಿತವಾಗಿ ನಡೆಯುವ ವಿಶ್ವಾಸವಿದೆ. ತಜ್ಞರ ಸಲಹೆಗಳಿಂದ ರೈತರಿಗೆ ಆಗುವ ಆರ್ಥಿಕ ನಷ್ಟ ತಪ್ಪಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಗೋ ಸೇವಾ ಆಯೋಗ
ಕರ್ನಾಟಕ ರಾಜ್ಯ ಗೋ ಸೇವಾ ಆಯೋಗವನ್ನು ರಚನೆಯಾಗಿದೆ. ನಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ ಗೋಸೇವಾ ಆಯೋಗವನ್ನು ಮತ್ತೆ ಕಾರ್ಯಪ್ರವೃತ್ತ ಮಾಡುತ್ತೇವೆ. ಗೋವುಗಳ ರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗುವುದು. ಗೋವುಗಳ ರಕ್ಷಣೆ, ಸಂವರ್ಧನೆ, ಗೋಶಾಲೆಗಳ ಅಭಿವೃದ್ಧಿ, ಗೋವು ಉತ್ಪನ್ನಗಳ ತಯಾರಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಗೋಹತ್ಯೆ ನಿಷೆಧ
ದೇಶದಲ್ಲಿ ಹಲವು ರಾಜ್ಯಗಳು ಗೋಹತ್ಯೆ ನಿಷೇಧ ಅನುಷ್ಟಾನಕ್ಕೆ ತಂದಿದ್ದು ಕರ್ನಾಟಕದಲ್ಲಿಯೂ ಸಮರ್ಪಕವಾಗಿ ಕಾರ್ಯಗತಗೊಳಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ರಾಜಸ್ಥಾನ್, ಆಂಧ್ರಪ್ರದೇಶ ಮತ್ತು ತೆಲಂಗಾಣ, ಅಸ್ಸಾಂ, ಬಿಹಾರ, ಚಂಡೀಗಡ, ಛತ್ತೀಸಗಡ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ್, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ತಮಿಳನಾಡು, ಉತ್ತರ ಪ್ರದೇಶ ರಾಜ್ಯಗಳಲ್ಲಿ ಗೋಹತ್ಯೆ ನಿಷೆಧ ಕಾಯ್ದೆ ಜಾರಿಯಲ್ಲಿದೆ.
ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಜಾರಿಗೊಳಿಸಲು ಬದ್ಧವಾಗಿದೆ. ಕೋವಿಡ್-19 ಸೋಂಕು ಇಳಿಮುಖವಾದ ನಂತರ ತಜ್ಞರ ತಂಡವನ್ನು ರಚನೆ ಮಾಡಿ ಅಗತ್ಯ ಬಿದ್ದಲ್ಲಿ ಉತ್ತರಪ್ರದೇಶ ಹಾಗೂ ಗುಜರಾತ್ ಗೆ ಭೇಟಿ ನೀಡಿ ಈ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ ರೀತಿಯ ಅಧ್ಯಯನ ನಡೆಸಿ·ಮುಖ್ಯಮಂತ್ರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ ಕರ್ನಾಟಕದಲ್ಲಿ ಗೋ ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಯನ್ನು ಬೇರೆ ರಾಜ್ಯಗಳಿಗಿಂತ ಹೆಚ್ಚು ಬಲಪಡಿಸಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.