ಬೆಂಗಳೂರು: ಬೆಂಗಳೂರಿನಲ್ಲಿ ಭೂಗತ ಪಾತಕಿ ಜೊತೆ ನಂಟು ಹೊಂದಿದ್ದ ಉದ್ಯಮಿಯನ್ನು ಹತ್ಯೆ ಮಾಡಲಾಗಿದೆ. ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ಜನನಿಬಿಡ ರಸ್ತೆಯಲ್ಲಿಯೇ ಉದ್ಯಮಿಯನ್ನು ಹತ್ಯೆಮಾಡಿದ್ದಾರೆ.
ಭೂಗತ ಜಗತ್ತಿನ ಜೊತೆ ನಂಟು ಹೊಂದಿದ್ದ ಮತ್ತು ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪವಿರುವ ಮನೀಶ್ ಶೆಟ್ಟಿ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಬ್ರಿಗೇಡ್ ರಸ್ತೆಯಲ್ಲಿರುವ ಬಾರ್ ವೊಂದರ ಸಹ ಮಾಲೀಕನಾಗಿರುವ ಮನೀಶ್ ಶೆಟ್ಟಿ ಅವರನ್ನು ಜನನಿಬಿಡ ರಸ್ತೆಯಲ್ಲಿಯೇ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಉಡುಪಿ ಮೂಲದ ಮನೀಶ್ ಶೆಟ್ಟಿ ಭೂಗತಪಾತಕಿಗಳಾದ ಬನ್ನಂಜೆ ರಾಜ, ರವಿ ಪೂಜಾರಿ, ದಾವೂದ್ ಸಹಚರರೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಗ್ಯಾಂಗ್ ಗಳ ನಡುವಿನ ದ್ವೇಷಕ್ಕೆ ಮನೀಶ್ ಶೆಟ್ಟಿಯಯನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ರಾತ್ರಿ 9.30 ರ ಸುಮಾರಿಗೆ ಪಬ್ ನಿಂದ ಮನೀಶ್ ಶೆಟ್ಟಿ ಹೊರಗೆ ಬರುತ್ತಿದ್ದಂತೆ ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಗನ್ ನಿಂದ ಫೈರಿಂಗ್ ಮಾಡಿ ಪರಾರಿಯಾಗಿದ್ದಾರೆ.
ಆರೋಪಿಗಳ ಪತ್ತೆಗೆ 9 ವಿಶೇಷ ತಂಡಗಳನ್ನು ರಚಿಸಲಾಗಿದೆ. ಘಟನಾ ಸ್ಥಳದ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸುತ್ತಲಿನ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದುಕೊಂಡಿದ್ದು ಹಂತಕರಿಗೆ ಶೋಧ ಕೈಗೊಂಡಿದ್ದಾರೆ.