ಬೆಂಗಳೂರು: ಮಾಜಿ ಮೇಯರ್ ಸಂಪತ್ ರಾಜ್ ಅವರ ಆಪ್ತ ಸಹಾಯಕ ಅರುಣ್ ಬಂಧಿಸಿರುವ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪತ್ ರಾಜ್ ಅವರ ಆಪ್ತ ಸಹಾಯಕ ಅರುಣ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಗಲಭೆಗೆ ಸಂಬಂಧಿಸಿದಂತೆ ಅರುಣ್ ಗೆ ಹೊಡೆದು ಕೃತ್ಯವನ್ನು ಒಪ್ಪಿಕೊಳ್ಳುವಂತೆ ಹಿಂಸೆ ನೀಡಿದ್ದಾರೆ ಎಂದು ಅರುಣ್ ಕುಟುಂಬಸ್ಥರು ಶುಕ್ರವಾರ ರಾತ್ರಿ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳದಿಂದ ತೆರಳುವಂತೆ ತಿಳಿಸಿದರೂ ಕೇಳದೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಗಲಭೆಗೆ ಮೊದಲು ಎಸ್ಡಿಪಿಐ ಮುಖಂಡ ಸೇರಿದಂತೆ ಕೆಲವರಿಗೆ ಅರುಣ್ ತನ್ನ ಮೊಬೈಲ್ ನಿಂದ ಕರೆ ಮಾಡಿದ್ದು ಬಂಧಿತ ಕೆಲವು ಆರೋಪಿಗಳೊಂದಿಗೆ ಮೊಬೈಲ್ ಮೂಲಕ ನಿರಂತರ ಸಂಪರ್ಕದಲ್ಲಿದ್ದ ಎಂದು ಹೇಳಲಾಗಿದೆ.