ಶಿವಮೊಗ್ಗ: ಸ್ಮಾಟ್‍ಸಿಟಿ ಕಾಮಗಾರಿಯಿಂದ ನಗರ ಸ್ಮಾರ್ಟ್ ಆಗುವ ಬದಲು ನಗರಕ್ಕೆ ಕಂಟಕವಾಗುವ ಎಲ್ಲ ಲಕ್ಷಣಗಳು ಕಂಡುಬಂದಿದ್ದು, ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಆದಿಚುಂಚನಗಿರಿ ಶಾಲೆಯ ಮುಂಭಾಗದಲ್ಲಿ ಸ್ಮಾರ್ಟ್‍ಸಿಟಿ ವತಿಯಿಂದ ನಡೆಯುತ್ತಿರುವ ಬಾಕ್ಸ್ ಡ್ರೈನೇಜ್ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಪ್ರಭಾವಿ ವ್ಯಕ್ತಿಗಳನ್ನು ಸಂತೃಪ್ತಿಪಡಿಸಲು ಕಾಮಗಾರಿಯ ಚಿತ್ರಣ ಬದಲಾಯಿಸಲಾಗಿದ್ದು, ಬಾಕ್ಸ್ ಚರಂಡಿ ರಸ್ತೆಯನ್ನೇ ಅತಿಕ್ರಮಿಸಿದ್ದು, ನೀರು ಸರಾಗವಾಗಿ ಹರಿಯದ ರೀತಿಯಲ್ಲಿ ನಿರ್ಮಿಸಲಾಗಿದೆ. ಶಾಲಾ ಆವರಣ ಗೋಡೆಯಿಂದ ಸುಮಾರು 10 ಅಡಿ ದೂರದಲ್ಲಿ ರಸ್ತೆ ಮಧ್ಯ ಭಾಗದಲ್ಲಿ ಬಾಕ್ಸ್ ಡ್ರೈನೇಜ್ ನಿರ್ಮಿಸಲಾಗಿದೆ. ಬಾಕ್ಸ್ ಚರಂಡಿಯ ಕೊನೆಯಲ್ಲಿ ಅಡ್ಡಲಾಗಿ ಕಾಂಕ್ರಿಟ್ ಸ್ಲ್ಯಾಬ್ ಇದ್ದು, ಸಂಪೂರ್ಣ ಕಾಮಗಾರಿ ಅವೈಜ್ಞಾನಿಕವಾಗಿದೆ.
ಅಧಿಕಾರಿಗಳನ್ನು ನಾಗರಿಕ ಹಿತರಕ್ಷಣಾ ವೇದಿಕೆ ಈ ಬಗ್ಗೆ ಪ್ರಶ್ನಿಸಿದಾಗ ಹಾರಿಕೆಯ ಉತ್ತರ ನೀಡುತ್ತಿದ್ದು, ಸಾರ್ವಜನಿಕರ ತೆರಿಗೆ ಹಣ ಮಣ್ಣುಪಾಲಾಗಿದೆ. ಕೂಡಲೇ ಹಿರಿಯ ಅಧಿಕಾರಿಗಳು ಮತ್ತು ಮಹಾನಗರಪಾಲಿಕೆ ಆಯುಕ್ತರು, ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಸ್ಮಾರ್ಟ್‍ಸಿಟಿ ಕಾಮಗಾರಿಗಳ ನೈಜ ಸ್ವರೂಪವನ್ನು ಕಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.