ಬೆಂಗಳೂರು: ಬೆಂಗಳೂರು ಸೇರಿ ಅನೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ಇದ್ದರೂ ಜನ ಕ್ಯಾರೇ ಎನ್ನದ ಹಿನ್ನಲೆಯಲ್ಲಿ ಇಂದಿನಿಂದ ಮತ್ತಷ್ಟು ಬಿಗಿಗೊಳಿಸಲಾಗುವುದು ಎನ್ನಲಾಗಿದೆ.
ಕೊರೊನಾ ಸೋಂಕು ತಡೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದ್ದು, ಹಲವೆಡೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತ್ತೆ ಕೆಲವು ಕಡೆ ಲಾಕ್ ಡೌನ್ ಇದ್ದರೂ ಎಗ್ಗಿಲ್ಲದೇ ಜನ ಸುತ್ತಾಟ ನಡೆಸಿದ್ದಾರೆ. ಜನರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ನಡೆಸಿದ್ದು, ಇಂದಿನಿಂದ ಮಧ್ಯಾಹ್ನ 12 ಗಂಟೆ ನಂತರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಕೆಲವರು ಅನಗತ್ಯವಾಗಿ ಓಡಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಂದಿನಿಂದ ಲಾಕ್ಡೌನ್ ಮತ್ತಷ್ಟು ಬಿಗಿಗೊಳಿಸಲಾಗುವುದು. ಅದೇ ರೀತಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಧ್ಯಾಹ್ನದವರೆಗೆ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ. ಸೋಂಕು ತಡೆಯುವ ಉದ್ದೇಶದಿಂದ ಅನೇಕ ಜಿಲ್ಲೆಗಳಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದ್ದು ಇಂದಿನಿಂದ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು.
ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಕಟ್ಟುನಿಟ್ಟಾಗಿ ಲಾಕ್ಡೌನ್ ಜಾರಿಗೊಳಿಸಲಾಗುವುದು ಎಂದು ಹೇಳಿರುವುದರಿಂದ ಪೊಲೀಸರು ಇನ್ನಷ್ಟು ಬಿಗಿ ಕ್ರಮಕೈಗೊಳ್ಳಲಿದ್ದಾರೆ.