ಕೆಲ ತಿಂಗಳ ಹಿಂದಷ್ಟೇ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಜನ ಚೇತರಿಸಿಕೊಳ್ಳುವ ಮೊದಲೇ ಮತ್ತೆ ಮಹಾ ಮಳೆಯಾಗಿದೆ. ಭಾರಿ ಮಳೆ ಮತ್ತು ಪ್ರವಾಹದಿಂದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಅನೇಕ ಜಿಲ್ಲೆಗಳ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಭೀಮಾ, ಕಾಗಿಣಾ, ಮಲಪ್ರಭಾ, ಕೃಷ್ಣಾ ಸೇರಿದಂತೆ ಪ್ರಮುಖ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಕೆರೆಕಟ್ಟೆಗಳು ಕೋಡಿ ಒಡೆದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕಷ್ಟಪಟ್ಟು ಬೆಳೆದಿದ್ದ ಲಕ್ಷಾಂತರ ಹೆಕ್ಟೇರ್ ಪ್ರದೇಶದ ಬೆಳೆ ನೀರಿನಿಂದ ಆವೃತವಾಗಿದೆ.
ಜಮೀನು, ಗ್ರಾಮಗಳು ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳು ಕುಸಿದು ಬಿದ್ದಿವೆ. ಮನೆಯಲ್ಲಿದ್ದ ಧವಸ, ಧಾನ್ಯ ವಸ್ತುಗಳು ಹಾಳಾಗಿವೆ. ಭಾರಿ ಮಳೆಗೆ ಕಂಗಾಲಾದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಇನ್ನು 24 ಗಂಟೆಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಜನ ಜೀವ ಉಳಿಸಿಕೊಳ್ಳಲು ಎತ್ತರದ ಪ್ರದೇಶಕ್ಕೆ ತೆರಳಿದ್ದಾರೆ. ಹಲವೆಡೆ ಸಂಪರ್ಕ ಕಡಿತಗೊಂಡಿದೆ. ಅನೇಕ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಅನೇಕ ಗ್ರಾಮಗಳು ದ್ವೀಪದಂತಾಗಿದ್ದು ಮೊದಲೇ ಸಂಕಷ್ಟದಲ್ಲಿದ್ದ ಜನ ಕಂಗಾಲಾಗಿದ್ದಾರೆ.