ಬೆಂಗಳೂರು ಟು ಜೈಪುರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗಂಡು ಮಗುವಿಗೆ ಗರ್ಭಿಣಿ ಜನ್ಮ ನೀಡಿದ್ದ ಘಟನೆ ಮಾರ್ಚ್ನಲ್ಲಿ ನಡೆದಿತ್ತು. ಇದೀಗ ಈ ದಂಪತಿ ಮಗುವಿನ ಜನನ ಪ್ರಮಾಣಪತ್ರಕ್ಕಾಗಿ ಅಲೆಯುವಂತಾಗಿದೆ.
ಇಂಡಿಗೋ ವಿಮಾನದಲ್ಲಿ ಮಾರ್ಚ್ 17ರಂದು ಪ್ರಯಾಣ ಮಾಡುತ್ತಿದ್ದ ವೇಳೆ ಗರ್ಭಿಣಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಇದೇ ವಿಮಾನದಲ್ಲಿ ಡಾ. ಸುಬಾಹನಾ ನಾಜಿರ್ ಹೆರಿಗೆ ಮಾಡಿಸಿಕೊಟ್ಟಿದ್ದರು.
ಸರ್ಕಾರದ ನಿಯಮಾವಳಿಗಳ ಪ್ರಕಾರ ಮಗು ಜನಿಸಿದ 21 ದಿನಗಳ ಒಳಗಾಗಿ ಜನನ ಪ್ರಮಾಣ ಪತ್ರಕ್ಕೆ ಅರ್ಜಿಯನ್ನ ಸಲ್ಲಿಸಬೇಕು.
33 ಸಾವಿರ ಅಡಿ ಎತ್ತರದಲ್ಲಿ ಮಗು ಜನಿಸಿದ ಬಳಿಕ ತಂದೆ ಭೈರೋನ್ ಸಿಂಗ್ ಎಲ್ಲಾ ಕಡೆ ಹೆಡ್ಲೈನ್ಸ್ನಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ರು. ಈ ಜನಪ್ರಿಯತೆ ಭೈರೋನ್ ಸಿಂಗ್ರ ಕಷ್ಟಕ್ಕೆ ನೆರವಾಗಲಿಲ್ಲ. ಬೆಂಗಳೂರಿನಲ್ಲಿ ಆಟೋ ಡ್ರೈವರ್ ಆಗಿರುವ ಭೈರೋನ್ ಮಗುವಿನ ಜನನ ಪ್ರಮಾಣ ಪತ್ರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ.
ವಿಮಾನದಲ್ಲಿ ಮಗುವಿನ ಜನನವಾಗುತ್ತಿದ್ದಂತೆಯೇ ತಾಯಿ ಹಾಗೂ ಕಂದಮ್ಮನನ್ನ ಖಾಸಗಿ ಆಸ್ಪತ್ರೆಗೆ ವಿಮಾನಯಾನ ಸಿಬ್ಬಂದಿ ದಾಖಲು ಮಾಡಿದ್ದರು. ಮಗು ಹಾಗೂ ತಾಯಿಯ ಆರೋಗ್ಯ ಸರಿಯಾಗಿದೆ ಎಂದು ವೈದ್ಯರು ವರದಿಯನ್ನೂ ನೀಡಿದ್ದಾರೆ. ಆಸ್ಪತ್ರೆಯ ದುಬಾರಿ ಬಿಲ್ಗಳನ್ನ ಭರಿಸಲು ಶಕ್ತನಿಲ್ಲದ ಭೈರೂನ್ ಮಗು ಹಾಗೂ ತಾಯಿಯನ್ನ ಡಿಸ್ಚಾರ್ಜ್ ಮಾಡಿಸಿ ಅಜ್ಮೇರ್ ಜಿಲ್ಲೆಯಲ್ಲಿರುವ ಬೇವಾರ್ ಹಳ್ಳಿಗೆ ಕರೆದೊಯ್ದಿದ್ದ.
ಊರಿಗೆ ತೆರಳಿದ ಕೆಲ ದಿನಗಳ ಬಳಿಕ ಸಿಂಗ್ ಮಗುವಿನ ಜನನ ಪ್ರಮಾಣ ಪತ್ರಕ್ಕಾಗಿ ಸಿದ್ಧತೆ ನಡೆಸಿದ್ದ. ಈತ ಅಷ್ಟೇನು ಓದಿದವನಲ್ಲ. ಸರ್ಕಾರಿ ಕಚೇರಿಯಲ್ಲಿ ದಿನಕ್ಕೊಂದು ನೆಪವನ್ನೊಡ್ಡಿ ಈತನನ್ನ ಕಚೇರಿಯಿಂದ ಕಚೇರಿಗೆ ಅಲೆಸುತ್ತಿದ್ದಾರಂತೆ.
ಮಗುವಿನ ತಂದೆ ಮೊದಲು ಸರ್ಪಂಚ್ರನ್ನ ಭೇಟಿಯಾಗಿದ್ದರು. ಅಲ್ಲಿ ಅವರು ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಹೇಳಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಹೋದರೆ ಮತ್ತೊಂದು ಆಸ್ಪತ್ರೆಗೆ ತೆರಳುವಂತೆ ಸೂಚನೆ ಸಿಕ್ಕಿದೆ. ಮಗು ವಿಮಾನದಲ್ಲಿ ಜನಿಸಿದ್ದರಿಂದ ಅಧಿಕಾರಿಗಳು ಗೊಂದಲಕ್ಕೆ ಈಡಾಗಿದ್ದಾರೆ ಅಂತಾರೆ ಬೈರೂನ್ ಸಿಂಗ್.
ನಾನು ಮೊದಲು ಅಂಚೆ ಕಚೇರಿಗೆ ಭೇಟಿ ನೀಡಿದ್ದೆ. ಅಲ್ಲಿ ನನಗೆ ಜವಾಲಾ ಆಸ್ಪತ್ರೆಗೆ ಹೋಗಿ ಎಂದು ಹೇಳಿದ್ರು. ಬಳಿಕ ನನಗೆ ಜೈಪುರ ಏರ್ಪೋರ್ಟ್ಗೆ ಹೋಗಿ ಸರ್ಟಿಫಿಕೇಟ್ ತನ್ನಿ ಎಂದು ಹೇಳಿದ್ರು. ಪ್ರತಿಯೊಂದು ಕಚೇರಿಯಲ್ಲೂ ನಾನು ಮೂರರಿಂದ ನಾಲ್ಕು ದಿನ ವ್ಯರ್ಥ ಮಾಡಿದ್ದೇನೆ ಅಂತಾರೆ ಸಿಂಗ್.
ಇತ್ತ ಜೈಪುರ ವಿಮಾನ ನಿಲ್ದಾಣದಿಂದಲೂ ಬೈರೂನ್ ಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಇಂಡಿಗೋ ವಿಮಾನಯಾನ ಸಂಸ್ಥೆ ಮಾತ್ರ ಮಗುವಿನ ಆರೋಗ್ಯವನ್ನ ವಿಚಾರಿಸಿದೆ. ಇದನ್ನ ಹೊರತುಪಡಿಸಿ ಮಗುವಿನ ಜನನ ಪ್ರಮಾಣ ಪತ್ರ ಸಂಬಂಧ ಇಂಡಿಗೋ ಸಂಸ್ಥೆ ಕೂಡ ಯಾವುದೇ ಸಹಾಯ ಮಾಡಿಲ್ಲವಂತೆ.
ಜೈಪುರ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಿದ್ದರಿಂದ ಜೈಪುರ ಮುನ್ಸಿಪಾಲಿಟಿ ಜನನ ಪ್ರಮಾಣ ಪತ್ರ ನೀಡಬಹುದು. ಇದಕ್ಕೂ ಮೊದಲು ಜೈಪುರ ವಿಮಾನ ನಿಲ್ದಾಣ ಪೋಷಕರ ಪರವಾಗಿ ಮುನ್ಸಿಪಾಲಿಟಿಗೆ ಪತ್ರವನ್ನ ಬರೆದುಕೊಡಬೇಕು. ಈ ರೀತಿ ಮಾಡಿದ್ರೆ ಮಗುವಿನ ಜನನ ಪ್ರಮಾಣ ಪತ್ರ ಸಿಗಬಹುದಾಗಿದೆ.