ರಾಜ್ಯ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ಸರ್ಕಾರದ ಖಜಾನೆಯಲ್ಲಿರೋದು ಕಾರ್ಮಿಕರ ಹಣ. ಕಳೆದ ಬಾರಿಯ ಪ್ಯಾಕೇಜ್ ಅನುದಾನವೇ ಜನರ ಕೈ ಸೇರಿಲ್ಲ. ಇನ್ನು ಈ ಬಾರಿಯ ಪ್ಯಾಕೇಜ್ ಹಣ ಕೊಡುತ್ತಾರೆ ಎಂಬ ನಂಬಿಕೆ ನಮಗಿಲ್ಲ ಎಂದು ಗುಡುಗಿದ್ರು.
ರಾಜ್ಯ ಸರ್ಕಾರ ಇದನ್ನ 1250 ಕೋಟಿ ರೂಪಾಯಿ ಮೌಲ್ಯದ ವಿಶೇಷ ಪ್ಯಾಕೇಜ್ ಎಂದು ಹೇಳಿದೆ. ಆದರೆ ವಾಸ್ತವವಾಗಿ ಇದು 1111.2 ಕೋಟಿ ರೂಪಾಯಿ ಮೌಲ್ಯದ ಪ್ಯಾಕೇಜ್ ಆಗಿದೆ. ರಾಜ್ಯ ಸರ್ಕಾರ ಸಾಲ ಮರುಪಾವತಿ ದಿನಾಂಕವನ್ನ ಮುಂದೂಡಿದೆ ಅಷ್ಟೇ. ಇದರಿಂದ ರೈತರಿಗೆ ಏನೂ ಪ್ರಯೋಜವಾಗೋದಿಲ್ಲ. ಅಲ್ಲದೇ ಕಟ್ಟಡ ಕಾರ್ಮಿಕರಿಗೆ ಪರಿಹಾರವನ್ನೇನ್ನೋ ಸರ್ಕಾರ ಘೋಷನೆ ಮಾಡಿದೆ. ಆದರೆ ಇದರಿಂದ ಸರ್ಕಾರದಿಂದ ಒಂದೇ ಒಂದು ರೂಪಾಯಿ ಹಣ ಹೋಗೋದಿಲ್ಲ. ಬದಲಾಗಿ ಕಾರ್ಮಿಕ ಕಲ್ಯಾಣ ನಿಧಿಯ ಹಣವನ್ನ ಬಳಕೆ ಮಾಡಲಾಗುತ್ತದೆ. ಇದರಿಂದಾಗಿ ಕೇವಲ 628.38 ಕೋಟಿ ಉಳಿಯುತ್ತೆ ಎಂದು ಹೇಳಿದ್ರು.
ಕಳೆದ ಬಾರಿಯ ಪ್ಯಾಕೇಜ್ನಲ್ಲೂ 7 ಲಕ್ಷದ 75 ಸಾವಿರ ಚಾಲಕರಿಗೆ ಪರಿಹಾರ ನೀಡೋದಾಗಿ ಘೋಷಣೆ ಮಾಡಿದ್ದರು. ಈ ಬಾರಿ ಮತ್ತೆ ಮೂರು ಸಾವಿರ ರೂಪಾಯಿ ನೀಡೋದಾಗಿ ಹೇಳಿದ್ದಾರೆ. ಕಳೆದ ಬಾರಿ ಚಾಲಕರಿಗೆ ಸರ್ಕಾರ ಘೋಷಿಸಿದ ಪರಿಹಾರದ ಹಣ ಸಿಕ್ಕಿಲ್ಲ. ಈ ಬಾರಿಯೂ ಈ ಹಣ ಸಿಗುತ್ತೆ ಎಂಬ ನಂಬಿಕೆ ನಮಗಿಲ್ಲ ಎಂದು ಆಕ್ರೋಶ ಹೊರಹಾಕಿದ್ರು.
ನಾನು ಲಾಕ್ಡೌನ್ ಆದೇಶ ಜಾರಿಗೆ ತಂದು ಬಡವರಿಗೆ ಉಚಿತವಾಗಿ 10 ಕೆಜಿ ಅಕ್ಕಿ ಹಾಗೂ ಮಾಸಿಕ 3 ಸಾವಿರ ರೂಪಾಯಿ ನೀಡಿ ಎಂದು ಸಲಹೆ ನೀಡಿದ್ದೆ. ಆದರೆ ಇದನ್ನ ಸರ್ಕಾರ ಮಾಡಿಲ್ಲ. ಆಂಧ್ರ ಪ್ರದೇಶ, ದೆಹಲಿ, ಕೇರಳ ಸೇರಿದಂತೆ ಹಲವೆಡೆ 1250 ಕೋಟಿಗೂ ಅಧಿಕ ಮೊತ್ತ ಪ್ಯಾಕೇಜ್ ಘೋಷಣೆಯಾಗಿದೆ. ಆದರೆ ನಮ್ಮಲ್ಲಿ ಮಾತ್ರ ಅವೈಜ್ಞಾನಿಕ ಪ್ಯಾಕೇಜ್ ಆಗಿದೆ ಎಂದು ಕಿಡಿಕಾರಿದ್ರು.