ಬೆಂಗಳೂರು: ಎಲ್ಕೆಜಿಯಿಂದ 10ನೇ ತರಗತಿಯವರೆಗೂ ಸೀಮಿತವಾಗಿ ಆನ್ಲೈನ್ ಶಿಕ್ಷಣಕ್ಕೆ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಂದ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ ಎಂದು ಹೇಳಲಾಗಿದೆ.
ಪೋಷಕರ ವ್ಯಾಪಕ ವಿರೋಧದ ನಡುವೆಯೇ ರಾಜ್ಯ ಸರ್ಕಾರ ಎಲ್ಕೆಜಿಯಿಂದ 10ನೇ ತರಗತಿಯವರೆಗೆ ಸೀಮಿತ ಅವಧಿಯ ಆನ್ಲೈನ್ ಶಿಕ್ಷಣಕ್ಕೆ ಅನುಮತಿ ನೀಡಿದೆ. ಶಾಲೆಗಳು ಸಂಯೋಜಿತ ವಿಧಾನದಲ್ಲಿ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನೀಡಬಹುದಾಗಿದೆ. ಇದಕ್ಕಾಗಿ ಹೆಚ್ಚುವರಿ ಶುಲ್ಕ ವಿಧಿಸಬಾರದು. ವಾರ್ಷಿಕ ಬೋಧನಾ ಶುಲ್ಕದಿಂದಲೇ ವೆಚ್ಚ ಭರಿಸಿಕೊಳ್ಳಬೇಕು ಎಂದು ಹೇಳಲಾಗಿದೆ.
ಎಲ್ಕೆಜಿ ಇಂದ ಯುಕೆಜಿವರೆಗೆ ವಾರಕ್ಕೆ ಒಂದು ದಿನ 30 ನಿಮಿಷ ಮಾತ್ರ ಪೋಷಕರ ಮಾರ್ಗದರ್ಶನದೊಂದಿಗೆ ತರಗತಿ ನಡೆಸಬಹುದು. ಒಂದರಿಂದ ಐದನೇ ತರಗತಿ ಮಕ್ಕಳಿಗೆ ವಾರದಲ್ಲಿ ಮೂರು ದಿನ 30ರಿಂದ 44 ನಿಮಿಷಗಳ ಅವಧಿ 2 ಪೀರಿಯಡ್ ನಡೆಸಬಹುದು.
6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ 5 ದಿನ ತಲಾ 30ರಿಂದ 44 ನಿಮಿಷಗಳ 2 ಅವಧಿಯ ಕ್ಲಾಸ್ ಮಾಡಬಹುದು. 9 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ 5 ದಿನ 30 ರಿಂದ 44 ನಿಮಿಷ 4 ಆನ್ಲೈನ್ ಕ್ಲಾಸ್ ನಡೆಸಬಹುದು ಎಂದು ಹೇಳಲಾಗಿದೆ.