
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರಾಜ್ಯಕ್ಕೆ ಇಂದು ಕೇಂದ್ರದ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಲಿದೆ.
ರಾಜ್ಯದ ಪರಿಸ್ಥಿತಿ ಬಗ್ಗೆ ಎರಡು ದಿನಗಳ ಕಾಲ ಅಧಿಕಾರಿಗಳು ಅಧ್ಯಯನ ನಡೆಸಲಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದ ಬಗ್ಗೆ ಅಧ್ಯಯನ ನಡೆಸಿದ ಬಳಿಕ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮಾಹಿತಿ ನೀಡಲಿದ್ದಾರೆ. ಅಧಿಕಾರಿಗಳ ಮಾಹಿತಿ ಆಧರಿಸಿ ಕೇಂದ್ರ ಸರ್ಕಾರ ಮತ್ತಷ್ಟು ಪರಿಣಾಮಕಾರಿ ಕ್ರಮಕೈಗೊಳ್ಳಲಿದೆ ಎನ್ನಲಾಗಿದೆ.
ಇಂದು ಮಧ್ಯಾಹ್ನ 12 ಗಂಟೆಗೆ ಕೇಂದ್ರದ ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಭೆ ನಡೆಸಲಿದ್ದು, ಕೊರೊನಾ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. 2 ದಿನ ರಾಜ್ಯದಲ್ಲಿ ಕೊರೊನಾ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯುವ ತಂಡ ಕೇಂದ್ರಕ್ಕೆ ವರದಿ ನೀಡಲಿದ್ದು, ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.