ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಾವದ ಕುರಿತಂತೆ ಡಿಸಿಎಂ ಗೋವಿಂದ ಕಾರಜೋಳ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾವು ಈಗಾಗಲೇ 3 ಕೋಟಿ ಕೊರೊನಾ ಲಸಿಕೆಗೆ ಆರ್ಡರ್ ನೀಡಿದ್ದೇವೆ. 2 ಕೋಟಿ ಕೋವಿಶೀಲ್ಡ್ ಹಾಗೂ 1 ಕೋಟಿ ಕೋವ್ಯಾಕ್ಸಿನ್ ಲಸಿಕೆ ರಾಜ್ಯಕ್ಕೆ ಬೇಕೆಂದು ಬೇಡಿಕೆ ಇಟ್ಟಿದ್ದೆವು ಆದರೆ ಇಂದಿನವರೆಗೂ 10 ಲಕ್ಷ ಲಸಿಕೆಗಳೂ ಪೂರೈಕೆ ಆಗಿಲ್ಲ ಎಂದು ಹೇಳಿದ್ರು.
ನಾನೇ ಕೋವಿಡ್ ಟಾಸ್ಕ್ ಫೋರ್ಸ್ ಚೇರ್ಮನ್ ಆಗಿದ್ದ ವೇಳೆಯಲ್ಲಿ 3 ಕೋಟಿ ಲಸಿಕೆಗಾಗಿ ಆರ್ಡರ್ ಮಾಡಿದ್ದೆ. ಬಳಿಕ ನನಗೆ ಬೆಳಗಾವಿ ಜಿಲ್ಲೆಯ ಉಸ್ತುವಾರಿ ವಹಿಸಿದ ಮೇಲೆ ಚೇರ್ ಮನ್ ಸ್ಥಾನವನ್ನ ಬೇರೆಯವರಿಗೆ ನೀಡುವಂತೆ ಸಿಎಂ ಬಳಿ ಮನವಿ ಮಾಡಿದ್ದೆ. ಅದರಂತೆ ಈ ಸ್ಥಾನವನ್ನ ಬದಲಾವಣೆ ಮಾಡಿದ್ರು. ಆದರೆ ನಾನು ಆರ್ಡರ್ ಮಾಡಿದ್ದ ಲಸಿಕೆ ಮಾತ್ರ ಇನ್ನೂ ಪೂರೈಕೆ ಆಗಿಲ್ಲ ಎಂದು ಕಾರಜೋಳ ಹೇಳಿದ್ರು.
ಇನ್ನು ಇದೇ ವೇಳೆ ಕೊರೊನಾ 2ನೇ ಅಲೆಯ ವಿಚಾರವಾಗಿಯೂ ಮಾತನಾಡಿದ ಅವ್ರು, ಪ್ರಸ್ತುತ ಯುವ ಜನತೆ ಹೆಚ್ಚಾಗಿ ಕೋವಿಡ್ನಿಂದ ಬಲಿಯಾಗುತ್ತಿದ್ದಾರೆ. ಯುವಕರು ಕೊರೊನಾ ಬಂದ ತಕ್ಷಣ ಆಸ್ಪತ್ರೆಗೆ ದಾಖಲಾಗುತ್ತಿಲ್ಲ. ಯಾವಾಗ ಉಸಿರು ನಿಲ್ಲುತ್ತೋ ಆಗ ಬಂದು ಆಸ್ಪತ್ರೆಗೆ ದಾಖಲಿಸ್ತಾರೆ. ಆದರೆ ಈ ಮಟ್ಟಕ್ಕೆ ಹೋಗುವವರೆಗೂ ವಿಳಂಬ ಮಾಡೋದು ಸರಿಯಲ್ಲ. ಯುವಕರೇ ಆಗಿರಲಿ, ಮುದಕರೇ ಆಗಲಿ ಸೋಂಕು ಬಂದ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳುವ ಕೆಲಸ ಆಗಬೇಕು. ನಿನ್ನೆ ಸಂಜೆ ರಾಮನಗರಕ್ಕೆ ಹೋಗಿದ್ದೆ. ಅಲ್ಲಿ ಶೇಕಡಾ 75ರಷ್ಟು ಮಂದಿ ಯುವಕರಿಗೆ ಸೋಂಕು ಬಂದಿದೆ. ನಿಜಕ್ಕೂ ಇದೊಂದು ನೋವಿನ ಸಂಗತಿ ಎಂದು ಬೇಸರ ಹೊರಹಾಕಿದ್ರು.