ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಆರೋಪ ಪಟ್ಟಿ ಸಲ್ಲಿಸಿದೆ.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಕೊಲೆಗೆ ಸಂಚು ರೂಪಿಸಲಾಗಿತ್ತು. ಮಾಜಿ ಮೇಯರ್ ಸಂಪತ್ ರಾಜ್, ಕಾರ್ಪೊರೇಟರ್ ಜಾಕೀರ್ ಹುಸೇನ್ ಅವರು ಗಲಭೆಗೆ ಕಾರಣರಾಗಿದ್ದಾರೆ ಎನ್ನಲಾಗಿದ್ದು, ಸ್ವಪಕ್ಷೀಯರೇ ಗಲಭೆಗೆ ಕಾರಣವೆಂದು ತನಿಖೆಯಿಂದ ಗೊತ್ತಾಗಿದ್ದು, ಇದರಿಂದ ಬೇಸರವಾಗಿದೆ. ನನ್ನ ಬಗ್ಗೆ ಅವರಿಗೆ ಬೇಸರವಿದ್ದರೆ ಪಕ್ಷದ ನಾಯಕರಿಗೆ ದೂರು ಕೊಡಬಹುದಿತ್ತು ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.
ಇನ್ನು ಗಲಭೆ ತನಿಖೆಯನ್ನು ತೀವ್ರಗೊಳಿಸಿದ ಎನ್ಐಎ ವತಿಯಿಂದ ಕಾಂಗ್ರೆಸ್ ಶಾಸಕರಿಬ್ಬರ ವಿಚಾರಣೆ ನಡೆಸಲಾಗಿದೆ. ಎನ್ಐಎ ಕಚೇರಿಗೆ ಕಾಂಗ್ರೆಸ್ ಶಾಸಕರಾದ ಜಮೀರ್ ಅಹಮ್ಮದ್, ರಿಜ್ವಾನ್ ಅರ್ಷದ್ ಅವರನ್ನು ಕರೆಸಿಕೊಂಡ ಅಧಿಕಾರಿಗಳು ನಿನ್ನೆ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಗಲಭೆ ನಡೆದ ಸಂದರ್ಭದಲ್ಲಿ ಪೊಲೀಸರು ಮನವಿ ಮಾಡಿದ್ದರಿಂದ ಸ್ಥಳಕ್ಕೆ ತೆರಳಲಾಗಿತ್ತು. ಪೊಲೀಸರೇ ಗಲಭೆ ನಡೆದ ದಿನ ಸ್ಥಳಕ್ಕೆ ಕರೆಸಿಕೊಂಡಿದ್ದರು. ಗಲಭೆ ನಿಯಂತ್ರಿಸುವ ಉದ್ದೇಶದಿಂದ ಕರೆಸಿಕೊಂಡಿದ್ದರು. ಪೊಲೀಸರ ಮನವಿ ಮೇರೆಗೆ ಸ್ಥಳಕ್ಕೆ ಹೋದೆವು ಎಂದು ಶಾಸಕರು ಹೇಳಿದ್ದಾರೆ. ವಿಚಾರಣೆ ವೇಳೆ ಎಲ್ಲ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಲಾಗಿದ್ದು, ಇನ್ನು ಮುಂದೆಯೂ ವಿಚಾರಣೆಗೆ ಸಹಕಾರ ನೀಡಲಾಗುವುದು ಎಂದು ರಿಜ್ವಾನ್ ಅವರು ತಿಳಿಸಿದ್ದಾರೆ.