ಬೆಂಗಳೂರು: ನಗರದಲ್ಲಿ ದಾಳಿಗೆ ಸಂಚು ರೂಪಿಸಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾದಳ ಬಂಧಿಸಿದೆ. ಅಬ್ದುಲ್ ರೆಹಮಾನ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಬಸವನಗುಡಿಯಲ್ಲಿ ಕಾರ್ಯಾಚರಣೆ ನಡೆಸಿದ ಎನ್ಐಎ ಅಧಿಕಾರಿಗಳು ಉಗ್ರನನ್ನು ಬಂಧಿಸಿದ್ದಾರೆ. ಈತ ಸಿರಿಯಾ ಮೂಲದ ಉಗ್ರರ ಜೊತೆ ಸಂಪರ್ಕದಲ್ಲಿದ್ದ. ವ್ಯವಸ್ಥಿತ ದಾಳಿಗೆ ಸಂಚು ರೂಪಿಸಿ ಉಗ್ರರಿಗೆ ಸಹಕಾರ ನೀಡುತ್ತಿದ್ದ ಎಂದು ಹೇಳಲಾಗಿದೆ.
ಬೆಂಗಳೂರು, ದೆಹಲಿ ಸೇರಿದಂತೆ ಹಲವೆಡೆ ದಾಳಿಗೆ ಸಂಚು ರೂಪಿಸಿದ್ದ ಆರೋಪಿ ಬಾಂಗ್ಲಾ ಮೂಲದ ನಿಷೇಧಿತ ಉಗ್ರ ಸಂಘಟನೆ ಸದಸ್ಯನಾಗಿದ್ದ. ತಿಹಾರ್ ಜೈಲಿನಲ್ಲಿರುವ ಅಬ್ದುಲ್ ಬಸಿತ್ ಜೊತೆಗೆ ಸಂಪರ್ಕ ಹೊಂದಿದ್ದ. ಸಿಎಎ ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ. ನೇತ್ರ ವೈದ್ಯನಾಗಿರುವ ಆರೋಪಿ 2014ರಲ್ಲಿ ಸಿರಿಯಾದ ಐಸಿಸ್ ಕ್ಯಾಂಪ್ ಗಳಿಗೆ ಭೇಟಿ ನೀಡಿ ಗಾಯಗೊಂಡವರಿಗೆ ಚಿಕಿತ್ಸೆ ಕೂಡ ನೀಡಿದ್ದಾನೆ ಎಂದು ಹೇಳಲಾಗಿದೆ.