ಅದು ಇನ್ನು ಆಗ ಹುಟ್ಟಿದ ಮಗು. ಆದರೆ ಅದಕ್ಕೆ ಹುಟ್ಟಿದ ನಂತರ ತನ್ನ ತಂದೆ – ತಾಯಿ ಮುಖ ನೋಡುವ ಭಾಗ್ಯವೇ ಇನ್ನೂ ಸಿಕ್ಕಿಲ್ಲ. ಇದಕ್ಕೆ ಕಾರಣ ಈ ಮಹಾಮಾರಿ ಕೊರೊನಾ. ಹೌದು, ಇಂತಹದೊಂದು ಘಟನೆ ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಇತ್ತ ತಾನೇ ಹೆತ್ತ ಮಗುವನ್ನು ನೋಡಲಾಗದೆ ಪರಿತಪಿಸುತ್ತಿದ್ದಾರೆ ಹೆತ್ತ ತಾಯಿ.
ಕಳೆದ ಮೂರು ದಿನಗಳ ಹಿಂದೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋಜನೂರು ಗ್ರಾಮದ ಗರ್ಭಿಣಿ ಮಹಿಳೆ ಗದಗ ಜಿಮ್ಸ್ ಆಸ್ಪತ್ರೆ ಬಂದು ದಾಖಲಾಗಿದ್ದಳು. ಈ ಗರ್ಭಿಣಿಗೆ ಮೊನ್ನೆಯಷ್ಟೆ ಸೋಂಕು ಧೃಡಪಟ್ಟಿದೆ. ಆದರೆ ಈಕೆಗೆ ನಿನ್ನೆ ಮುಂಜಾನೆ ಹೆರಿಗೆ ನೋವು ಕಂಡು ಬಂದಿದ್ದು, ಸೀಜೆರಿಯನ್ ಮಾಡುವ ಮೂಲಕ ಹೆರಿಗೆ ಮಾಡಿಸಲಾಗಿದೆ. ಆದರೆ ಮಗುವಿಕೆ ಉಸಿರಾಟದ ತೊಂದರೆ ಇದ್ದಿದ್ದರಿಂದ ಆ ಮಗುವನ್ನು ಪ್ರತ್ಯೇಕಿಸಿ ಇಡಲಾಗಿದೆ.
ಇನ್ನು ತಾಯಿಯ ಹಾಲನ್ನು ಬಾಟಲ್ ಮೂಲಕ ಹಾಕಿ ಮಗುವಿಗೆ ಉಣಿಸಲಾಗುತ್ತಿದೆ. ಇನ್ನು ಮಗುವಿನ ಕೊರೊನಾ ರಿಪೋರ್ಟ್‌ಗಾಗಿ ವೈದ್ಯರು ಕಾಯುತ್ತಿದ್ದಾರೆ. ಬಂಧು ಬಳಗ ಇದ್ದರೂ ಕೊರೊನಾದಿಂದಾಗಿ ಸದ್ಯಕ್ಕೆ ಅನಾಥವಾಗಿದೆ ಈ ಶಿಶು.