ಕೊರೊನಾ ಮಹಾಮಾರಿ ಕಾಟ ಇನ್ನೂ ತಪ್ಪುವಂತಿಲ್ಲ. ಇದೀಗ ಹೊಸ ರೂಪಾಂತರ ಪಡೆದುಕೊಳ್ಳುತ್ತಿದೆ ಈ ವೈರಸ್. ಹೀಗಾಗಿ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ. ಪ್ರಮುಖವಾಗಿ ಮಾರುಕಟ್ಟೆಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗೆ ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದೆ.
ಪ್ರತಿದಿನ ಮಾರುಕಟ್ಟೆಗೆ ಗಣನೀಯ ಪ್ರಮಾಣದಲ್ಲಿ ಜನರು ತಮ್ಮ ದೈನಂದಿನ ಅಗತ್ಯಗಳ ಖರೀದಿಗೆ ಭೇಟಿ ನೀಡುತ್ತಿದ್ದಾರೆ. ಇದಲ್ಲದೆ ಆಹಾರ ಮಳಿಗೆಗಳಿಗೂ ಕೂಡ ಭೇಟಿ ನೀಡುತ್ತಿದ್ದಾರೆ. ಕೋವಿಡ್-19 ಪಾಸಿಟಿವ್ ಕೇಸ್ ಕಡಿಮೆ ಆಗುತ್ತಿರುವ ಕಾರಣ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ.
ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮಾರುಕಟ್ಟೆಗಳಿಗೆ ಭೇಟಿ ನೀಡುತ್ತಿರುವುದು ಕಂಡು ಬಂದಿದೆ. ಹೀಗಾಗಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇನ್ನು ಈ ಮಾರ್ಗಸೂಚಿಗಳು ಸಗಟು ಮತ್ತು ಚಿಲ್ಲರೆ ವ್ಯಾಪಾರ ಮಳಿಗೆಗಳಿಗೆ ಅನ್ವಯವಾಗುತ್ತವೆ. ಇದರಲ್ಲಿ ಕೆಲವು ದೊಡ್ಡ ಪ್ರಮಾಣದ ಮಾರುಕಟ್ಟೆಗಳಾದ ಮಾಲ್ ಗಳು, ಹೈಪರ್ ಮಾರ್ಕೆಟ್‌ಗಳು ಸೂಪರ್ ಮಾರ್ಕೆಟ್‌ಗಳು ಕೂಡ ಸೇರುತ್ತವೆ.
ಕಂಟೈನ್ಮೆಂಟ್ ವಲಯಗಳಲ್ಲಿರುವ ಮಾರುಕಟ್ಟೆಗಳನ್ನು ಮುಚ್ಚಲು ಸೂಚಿಸಲಾಗಿದೆ. ಕಂಟೈನ್ಮೆಂಟ್ ವಲಯ ಹೊರತುಪಡಿಸಿರುವ ಮಾರುಕಟ್ಟೆಗಳನ್ನು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಮಕ್ಕಳು ಅಗತ್ಯವಿರುವ ಸಂದರ್ಭಗಳಲ್ಲಿ ಹೊರತುಪಡಿಸಿ ಇನ್ಯಾವ ಸಂದರ್ಭದಲ್ಲೂ ಮಾರುಕಟ್ಟೆಗಳಿಗೆ ಭೇಟಿ ನೀಡುವಂತಿಲ್ಲ. ಅತಿಹೆಚ್ಚು ಗಂಡಾಂತರ ಆರೋಗ್ಯ ಪರಿಸ್ಥಿತಿಯಲ್ಲಿರುವ ಉದ್ಯೋಗಿಗಳು, ಹಿರಿಯ ಉದ್ಯೋಗಿಗಳು, ಗರ್ಭಿಣಿ ಮಹಿಳಾ ಉದ್ಯೋಗಿಗಳು ಮತ್ತು ಅನಾರೋಗ್ಯ ಪರಿಸ್ಥಿತಿಯಿಂದ ಬಳಲುತ್ತಿರುವ ಉದ್ಯೋಗಿಗಳ ಬಗ್ಗೆ ಅಗತ್ಯವಾದ ಮುನ್ಸೂಚನೆಗಳನ್ನು ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಮಾರುಕಟ್ಟೆ ಮಾಲೀಕರ ಸಂಘವು ಈ ರೀತಿಯ ಜನಸಮುದಾಯವನ್ನು ಸಾರ್ವಜನಿಕ ಸಂಪರ್ಕದಿಂದ ದೂರ ಇರಲು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಸಲಹೆ ನೀಡಲಾಗಿದೆ.
ಇನ್ನು ಮಾರುಕಟ್ಟೆಗಳಲ್ಲಿ ಆರೋಗ್ಯಕರ ಪರಿಸರವನ್ನು ಕಾಯ್ದುಕೊಳ್ಳುವುದು. ಎಲ್ಲಾ ಮಳಿಗೆಗಳು ಕಡ್ಡಾಯವಾಗಿ ಶಾಶ್ವತ ಸ್ಥಿತಿಯಲ್ಲಿರುವಂತೆ ಚೌಕಾಕಾರ ಅಥವಾ ವೃತ್ತಾಕಾರದ ಗುರುತುಗಳನ್ನು 6 ಅಡಿಗಳ ದೈಹಿಕ ಅಂತರವನ್ನು ಎಲ್ಲಾ ಸಂದರ್ಭದಲ್ಲಿ ಕಾಯ್ದುಕೊಳ್ಳಲು ಮಾಡಬೇಕು. ಮಳಿಗೆಗಳ ಮಾಲೀಕರು ದೈನಂದಿನ ಚಟುವಟಿಕೆಗಳನ್ನು ಆರಂಭಿಸುವ ಮುನ್ನ ಶೇಕಡಾ 1 ರಷ್ಟು ಪ್ರಮಾಣದ ಸೋಡಿಯಂ ನೈಟ್ರೇಟ್ ದ್ರಾವಣದಿಂದ ಅಥವಾ ಗೃಹ ಬಳಕೆಯ ಮಾರ್ಜಕದಿಂದ ಮಳಿಗೆಯನ್ನು ಶುಚಿಗೊಳಿಸಬೇಕು.
ವ್ಯಾಲೆಟ್ ಪಾರ್ಕಿಂಗ್ ಜಾಗದಲ್ಲಿ, ಕಾರುಗಳನ್ನು ನಿಲ್ಲಿಸುವ ಹಾಗೂ ಹೊರತೆಗೆಯುವ ಮುನ್ನ ಸ್ಟೇರಿಂಗ್ ವೀಲ್, ಡೋರ್ ಗೆ ಸೋಂಕು ನಿವಾರಣೆ ಮಾಡಬೇಕು. ನಿಯಮಿತವಾದ ನಿಗಾವಣೆಯನ್ನು ಮಾಡಲು ಮಾರುಕಟ್ಟೆ ಮಾಲೀಕರ ಸಂಘಟನೆಯವರು ಉಪಸಮಿತಿಗಳನ್ನು ರಚಿಸಬೇಕು ಎಂದು ತಿಳಿಸಿದೆ.