ಮಂಡ್ಯ: ತೋಟಗಾರಿಕೆ ಸಚಿವ ನಾರಾಯಣಗೌಡ ಅಪಾಯದಿಂದ ಸ್ವಲ್ಪದರಲ್ಲೇ ಪಾರಾದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದ ಬಂಕಾಪುರ ಸಮೀಪ ನಡೆದಿದೆ.
ನಾರಾಯಣಗೌಡ ಕಾರ್ ನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಬಂಕಾಪುರದ ಸಮೀಪ ರಸ್ತೆ ಬದಿಯಲ್ಲೇ ಕಲ್ಲು ಬಂಡೆಯನ್ನು ಬ್ಲಾಸ್ಟ್ ಮಾಡಲಾಗಿದೆ. ಬೆಂಗಳೂರು -ಜಲಸೂರು ರಸ್ತೆ ನಿರ್ಮಾಣ ಕಾಮಗಾರಿಗಾಗಿ ಕಲ್ಲುಬಂಡೆ ಸಿಡಿಸಲು ಹಗಲಿನಲ್ಲಿಯೇ ಬ್ಲಾಸ್ಟಿಂಗ್ ಮಾಡಲಾಗಿದೆ.
ಇದೇ ಮಾರ್ಗವಾಗಿ ಸಚಿವರು ಕೆಆರ್ ಪೇಟೆಗೆ ಆಗಮಿಸುತ್ತಿದ್ದ ವೇಳೆ ಗುತ್ತಿಗೆದಾರ ಸ್ಪೋಟಕಗಳನ್ನು ಸಿಡಿಸಿದ್ದಾನೆ. ಸ್ಪೋಟಕ ಸಿಡಿಸುವ ವೇಳೆಯಲ್ಲಿ ರಸ್ತೆ ಸಂಚಾರ ಬಂದ್ ಮಾಡದೆ ವಾಹನಗಳ ಸಂಚಾರವಿದ್ದರೂ ಕೂಡ ಸ್ಪೋಟಕ ಸಿಡಿಸಲಾಗಿದೆ.
ಯಾವುದೇ ಮುನ್ನೆಚ್ಚರಿಕೆ, ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೆ ಕಲ್ಲುಬಂಡೆಗಳನ್ನು ಬ್ಲಾಸ್ಟ್ ಮಾಡಲಾಗಿದ್ದು ಬೇಜವಾಬ್ದಾರಿ ತೋರಿದ ಗುತ್ತಿಗೆದಾರನ ವಿರುದ್ಧ ಸಚಿವರು ಆಕ್ರೋಶ ವ್ಯಕ್ತಪಡಿಸಿ ಆತನನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಕೆಶಿಪ್ ರಸ್ತೆ ಕಾಮಗಾರಿ ಕೈಗೊಂಡಿದ್ದ ಮೈಸೂರಿನ ಗುತ್ತಿಗೆದಾರ ಶ್ರೀನಿವಾಸ ರಾಜ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.