ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಆನಂದಪುರ ಸಮೀಪದ ನರಸೀಪುರದ ನಾಟಿ ಔಷಧ ವಿತರಣೆ ಮತ್ತೆ ಆರಂಭಿಸಲಾಗಿದೆ.
ಸಾಗರ ತಾಲೂಕು ಅಧಿಕಾರಿಗಳ ಮಾರ್ಗದರ್ಶನದಂತೆ ನರಸೀಪುರ ನಾರಾಯಣಮೂರ್ತಿ ಕುಟುಂಬದವರು ಮತ್ತೆ ಔಷಧ ನೀಡುವುದದನ್ನು ಆರಂಭಿಸಿದ್ದಾರೆ. ಶಿವಗಂಗೆ ಗ್ರಾಮಕ್ಕೆ ಬರುವ ರೋಗಿಗಳಿಗೆ ಮೂಲಸೌಕರ್ಯ ಒದಗಿಸಲಾಗಿದ್ದು, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿದೆ.
ನರಸೀಪುರದ ನಾಟಿ ಔಷಧ ಪಡೆಯಲು ಕರ್ನಾಟಕ ಮಾತ್ರವಲ್ಲದೆ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳ ಮೊದಲಾದ ರಾಜ್ಯಗಳಿಂದ ಜನ ಬರುತ್ತಾರೆ. ಕೊರೋನಾ ಸೋಂಕು ಹೆಚ್ಚಾದ ಕಾರಣ ಮತ್ತು ನಾರಾಯಣಮೂರ್ತಿಯವರು ನಿಧನರಾದ ಹಿನ್ನೆಲೆಯಲ್ಲಿ ಕೆಲ ತಿಂಗಳ ಕಾಲ ಔಷಧ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಔಷಧ ವಿತರಣೆ ಆರಂಭಿಸಲಾಗಿದೆ ಎಂದು ಹೇಳಲಾಗಿದೆ.