ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಅರಮನೆಯ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ಆರಂಭವಾಗಿದ್ದು ಮೊದಲ ಬಾರಿಗೆ ಅಭಿಮನ್ಯು ಆನೆ ಅಂಬಾರಿಯನ್ನು ಹೊತ್ತು ಸಾಗಿದೆ.
ಗಾಂಭೀರ್ಯ ನಡಿಗೆಯೊಂದಿಗೆ ಅಂಬಾರಿ ಹೊತ್ತು ಸಾಗುತ್ತಿರುವ ಅಭಿಮನ್ಯು ಆನೆಗೆ ವಿಜಯ ಮತ್ತು ಕಾವೇರಿ ಆನೆಗಳು ಸಾಥ್ ನೀಡಿವೆ.
ವಿಶ್ವ ವಿಖ್ಯಾತ ಜಂಬೂಸವಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಶುಭ ಕುಂಭ ಲಗ್ನದಲ್ಲಿ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಅವರು ಪುಷ್ಪಾರ್ಚನೆ ಮಾಡಿದ್ದು, ಅಭಿಮನ್ಯುವಿನ ಮೇಲೆ ಚಿನ್ನದ ಅಂಬಾರಿಯಲ್ಲಿರುವ ದೇವಿಗೆ ಯಡಿಯೂರಪ್ಪ ಅವರೊಂದಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ಪುಷ್ಪಾರ್ಚನೆ ಮಾಡಿದ್ದಾರೆ.