ಬೆಂಗಳೂರು: ಕೊರೊನಾ ಕಾರಣದಿಂದ ಈ ಬಾರಿ ಸರಳವಾಗಿ ದಸರಾ ಆಚರಿಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಾಂಪ್ರದಾಯಿಕ ಆಚರಣೆಯನ್ನು ನಿಲ್ಲಿಸದೇ ಸರಳವಾಗಿ ದಸರಾ ಆಚರಿಸಲು ತೀರ್ಮಾನಿಸಲಾಗಿದೆ.
ವೈಭವದಿಂದ ಆಚರಿಸುವುದಕ್ಕೆ ಕಡಿವಾಣ ಹಾಕಲಾಗುವುದು. ಹೆಚ್ಚಿನ ಜನಸಂದಣಿ ಉಂಟಾಗದಂತೆ ಸಾಂಕೇತಿಕವಾಗಿ ಆಚರಣೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಾರಿ ದಸರಾ ಆಚರಣೆಗೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಗಜಪಡೆಯನ್ನು ಕನಿಷ್ಠ 5 ರಿಂದ 6 ಕ್ಕೆ ಸೀಮಿತಗೊಳಿಸಲಾಗುವುದು. ಅರಮನೆ ಆವರಣದಲ್ಲಿ ಜಂಬು ಸವಾರಿ ನಡೆಸಲಿದ್ದು, ಚಾಮುಂಡೇಶ್ವರಿ ದೇವಿಯ ಪೂಜೆ ಮತ್ತು ದಸರಾ ಉದ್ಘಾಟನೆಯನ್ನು ಕೊರೊನಾ ವಿರುದ್ಧ ಹೋರಾಟದಲ್ಲಿ ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್ ಗಳಾದ ನರ್ಸ್ ಗಳು, ಆಶಾ ಕಾರ್ಯಕರ್ತೆಯರು, ವೈದ್ಯರು, ಪೌರಕಾರ್ಮಿಕರು ಮತ್ತು ಪೊಲೀಸರಿಂದ ನೆರವೇರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ವಸ್ತುಪ್ರದರ್ಶನ, ಯುವದಸರಾ, ಮಹಿಳಾ ದಸರಾ, ಪಂಜಿನ ಕವಾಯತು ಮೊದಲಾದ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ.