ಮೈಸೂರು: ಆಷಾಢ ಶುಕ್ರವಾರ ಮೈಸೂರು ಚಾಮುಂಡೇಶ್ವರಿ ದರ್ಶನ ಪಡೆದರೆ ಒಳಿತಾಗುತ್ತದೆ ಎಂಬ ನಂಬಿಕೆಯಿಂದ ದೇವಿಯ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯ ಭಕ್ತರು ಬರುತ್ತಾರೆ.
ಈ ಬಾರಿ ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಆಷಾಢ ಶುಕ್ರವಾರಗಳಂದು ಚಾಮುಂಡೇಶ್ವರಿ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು, ಪ್ರಮುಖ ದಿನಗಳು ಮತ್ತು ಆಷಾಢ ಶುಕ್ರವಾರಗಳಂದು ದೇಗುಲ ಪ್ರವೇಶ ನಿಷೇಧಿಸಿದ್ದಾರೆ.
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆಷಾಢ ಶುಕ್ರವಾರ ಮತ್ತು ವಿಶೇಷ ದಿನಗಳಂದು ಪ್ರಮುಖ ದೇಗುಲಗಳಲ್ಲಿ ದೇವರ ದರ್ಶನ ಇರುವುದಿಲ್ಲ. ಚಾಮುಂಡೇಶ್ವರಿ ದೇವಾಲಯ ಮತ್ತು ಉತ್ತನಹಳ್ಳಿ ಜ್ವಾಲಾ ತ್ರಿಪುರ ಸುಂದರಮ್ಮಣಿ ದೇವಾಲಯದಲ್ಲಿ ದರ್ಶನ ಇರುವುದಿಲ್ಲ. ಶನಿವಾರ ಮತ್ತು ಭಾನುವಾರ ಗ್ರಾಮಸ್ಥರನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ವಾಹನ ಮತ್ತು ಮೆಟ್ಟಿಲುಗಳ ಮೂಲಕ ಬೆಟ್ಟಕ್ಕೆ ಭಕ್ತರು ಬರುವುದನ್ನು ನಿಷೇಧಿಸಲಾಗಿದೆ ಎನ್ನಲಾಗಿದೆ.