ಮೈಸೂರು: ಹಲವು ದಿನಗಳಿಂದ ಜಾನುವಾರುಗಳ ಮೇಲೆ ದಾಳಿ ನಡೆಸಿ ರೈತರು, ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದ್ದ 2 ಚಿರತೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ರಾಂಪುರ, ಹತ್ಯಾಳು ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಚಿರತೆ ಕಾಟದಿಂದ ಜನರು ಆತಂಕಕ್ಕೀಡಾಗಿದ್ದರು. ಚಿರತೆ ದಾಳಿಗೆ ಗ್ರಾದಲ್ಲಿ ಹಲವು ಜಾನುವಾರುಗಳು ಬಲಿಯಾಗಿದ್ದವು. ಜನರು ಜೀವ ಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಅರಣ್ಯ ಇಲಾಖೆಗೆ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು, ರೈತರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೆಲ ಗ್ರಾಮಗಳಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬೋನುಗಳನ್ನು ಇಟ್ಟಿದ್ದರು. ಇದೀಗ ನಂಜನಗೂಡು ವ್ಯಾಪ್ತಿಯ ಚಿಕ್ಕಯ್ಯನಛತ್ರದ ಹತ್ಯಾಳು ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ.
ಇದೇ ವೇಳೆ ಟಿ.ನರಸಿಪುರ ವ್ಯಾಪ್ತಿಯ ತಲಕಾಡು ಹೋಬಳಿಯ ಕುರುಬೋಳನಹುಂಡಿಯ ಬಾಳೆತೋಟದಲ್ಲಿ ಇಡಲಾಗಿದ್ದ ಬೋನಿಗೆ ಮತ್ತೊಂದು ಚಿರತೆ ಬಿದ್ದಿದೆ. ಎರಡೂ ಚಿರತೆಗಳನ್ನು ಸೆರೆ ಹಿಡಿಯಲಾಗಿದ್ದು, ಸದ್ಯ ರೈತರು, ಗ್ರಾಮಸ್ಥರು ಕೊಂಚ ನಿರಾಳರಾಗಿದ್ದರೆ.