ಬೆಂಗಳೂರು: ಪತಿಯೇ ಪತ್ನಿಯ ಕತ್ತು ಕೊಯ್ದು ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಹೊಂಗಸಂದ್ರ ಶ್ರೀನಿವಾಸ ಲೇಔಟ್ ನಿವಾಸಿ 26 ವರ್ಷದ ವೆಂಕಟಲಕ್ಷ್ಮಿ ಮೃತಪಟ್ಟವರು. ಪತಿ ಸುರೇಶ್(30) ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಭಾನುವಾರ ರಾತ್ರಿ ಸುರೇಶ್ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿದ್ದು ಯಾರೋ ಕೊಲೆ ಮಾಡಿ ಹೋಗಿದ್ದಾರೆ ಎಂದು ಬಿಂಬಿಸಿದ್ದಾನೆ. ಆದರೆ ಪೊಲೀಸರು ಅನುಮಾನದ ಮೇಲೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜ ಸಂಗತಿ ಬಯಲಾಗಿದೆ.
6 ವರ್ಷದ ಹಿಂದೆ ಮದುವೆಯಾದ ಸುರೇಶ್, ವೆಂಕಟಲಕ್ಷ್ಮಿ ದಂಪತಿಗೆ 4 ವರ್ಷದ ಮಗನಿದ್ದು ಸುರೇಶ್ ಟೈಲರಿಂಗ್ ಅಂಗಡಿ ಇಟ್ಟುಕೊಂಡಿದ್ದರು. ದಂಪತಿ ನಡುವೆ ಜಗಳವಾಗುತ್ತಿದ್ದು, ಕೌಟುಂಬಿಕ ಕಲಹವೇ ಕೊಲೆಗೆ ಕಾರಣವೆನ್ನಲಾಗಿದೆ. ಭಾನುವಾರ ತಡರಾತ್ರಿ ಊಟ ಮಾಡಿ ಸುರೇಶ್ ಮಗನೊಂದಿಗೆ ರೂಮ್ ನಲ್ಲಿ ಮಲಗಿದ್ದು ವೆಂಕಟಲಕ್ಷ್ಮಿ ಹಾಲ್ ನಲ್ಲಿ ಮಲಗಿದ್ದಾರೆ. ತಡರಾತ್ರಿ ಸುರೇಶ್ ಚಾಕುವಿನಿಂದ ಪತ್ನಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ಬೆಳಗ್ಗೆ 6 ಗಂಟೆಗೆ ಪತ್ನಿಯನ್ನು ಯಾರೋ ಕೊಲೆ ಮಾಡಿರುವುದಾಗಿ ಹೇಳಿ ಅಕ್ಕಪಕ್ಕದವರನ್ನು ಕರೆದಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಪತಿಯೇ ಕೊಲೆ ಮಾಡಿರುವ ರಹಸ್ಯ ಬೆಳಕಿಗೆ ಬಂದಿದೆ. ಮಗು ಅನಾಥವಾಗಿದೆ.