ಬೆಂಗಳೂರು: ಆರ್.ಆರ್. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾಜಿ ಶಾಸಕ ಮುನಿರತ್ನ ಚರ್ಚೆ ನಡೆಸಿದ್ದಾರೆ.
ಮುಖ್ಯಮಂತ್ರಿಯವರ ನಿವಾಸ ಕಾವೇರಿಯಲ್ಲಿ ಭೇಟಿಯಾದ ಅವರು ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮುನಿರತ್ನ ತಮಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ತುಳಸಿ ಮುನಿರಾಜುಗೌಡ ಅವರಿಂದ ಪೈಪೋಟಿ ಎದುರಾಗಿದೆ.
ಆರ್.ಆರ್. ನಗರ ಕ್ಷೇತ್ರದ ವಿಧಾನಸಭೆ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಮಾಲೋಚನೆ ನಡೆಸಿದ ಬಿಜೆಪಿ ಕೋರ್ ಕಮಿಟಿ, ಮುನಿರತ್ನ ಮತ್ತು ಮುನಿರಾಜು ಗೌಡ ಅವರ ಹೆಸರನ್ನು ಶಿಫಾರಸು ಮಾಡಿದೆ. ಬಿಜೆಪಿ ಟಿಕೆಟ್ ಸಿಗದಿದ್ದರೆ ಮುನಿರತ್ನ ಜೆಡಿಎಸ್ ನಿಂದ ಇಲ್ಲವೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಲ್ಲಿ ಮುನಿರತ್ನ ಅವರ ಪಾತ್ರವೂ ಇದೆ. ಅವರಿಗೇ ಟಿಕೆಟ್ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ. ಸಿಎಂ ಕೂಡ ಟಿಕೆಟ್ ಭರವಸೆ ನೀಡಿದ್ದಾರೆ ಎನ್ನಲಾಗಿದ್ದು, ಒಂದು ವೇಳೆ ಬಿಜೆಪಿ ಟಿಕೆಟ್ ಕೈತಪ್ಪಿದರೆ ಮುನಿರತ್ನ ನಿರ್ಧಾರ ಬದಲಿಸಲಿದ್ದಾರೆ ಎಂದು ಹೇಳಲಾಗಿದೆ.