ಬೆಂಗಳೂರು: ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
2020 -21 ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಪ್ರತಿ ರೈತರಿಂದ ಪ್ರತಿ ಎಕರೆಗೆ 16 ಕ್ವಿಂಟಾಲ್ ನಂತೆ ಗರಿಷ್ಠ 40 ಕ್ವಿಂಟಾಲ್ ಭತ್ತ ಮಾತ್ರ ಖರೀದಿಸಲು ನಿರ್ಧರಿಸಲಾಗಿದೆ. ಆದರೆ, ಹೆಚ್ಚುವರಿಯಾಗಿ 1 ಲಕ್ಷ ಮೆಟ್ರಿಕ್ ಟನ್ ಖರೀದಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆ ನಿರ್ಧರಿಸಿತು.
ಮುಂದಿನ ತಿಂಗಳಿಂದಲೇ ರೈತರ ನೋಂದಣಿ ಕಾರ್ಯ ಆರಂಭಿಸಿ ನಂತರ ಭತ್ತ ಖರೀದಿ ಆರಂಭಿಸಲಾಗುವುದು. ಇದಕ್ಕಾಗಿ ಅಗತ್ಯವಿರುವ ಅನುದಾನವನ್ನು ರಾಜ್ಯದ ಆವರ್ತನಿಧಿಯಿಂದ 300 ಕೋಟಿ ರೂ. ಬಿಡುಗಡೆ ಮಾಡಲು ಸಭೆ ನಿರ್ಧರಿಸಿದೆ.
ಖರೀದಿ ಕಾರ್ಯಕ್ಕೆ ಸಂಗ್ರಹಣಾ ಏಜೆನ್ಸಿಗಳನ್ನಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿಗಳಿಗೆ ಜಿಲ್ಲೆಗಳನ್ನು ನಿಯೋಜಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಆಹಾರ ನಿಗಮಕ್ಕೆ 27 ಕೋಟಿ ರೂ., ಉಗ್ರಾಣ ನಿಗಮಕ್ಕೆ 21 ಕೋಟಿ ರೂ., ಸಹಕಾರ ಮಹಾಮಂಡಳಕ್ಕೆ 8 ಕೋಟಿ ರೂ. ಸೇರಿದಂತೆ 56 ಕೋಟಿ ರೂ. ಬಾಕಿ ಇರುವ ಹಣವನ್ನು ಆವರ್ತನಿಧಿಯಿಂದ ಭರಿಸಲು ಕ್ರಮಕೈಗೊಳ್ಳಲಾಗುವುದು.
ಭತ್ತದ ಜೊತೆಗೆ ಶೇಂಗಾ, ತೊಗರಿಬೇಳೆ, ಸೋಯಾಬೀನ್ ಖರೀದಿಗೂ ಕೂಡ ಕ್ರಮಕೈಗೊಳ್ಳಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆ ನಿರ್ಧರಿಸಿದೆ. ಆದರೆ, ಮೆಕ್ಕೆಜೋಳ ಖರೀದಿಗೆ ಸಂಬಂಧಿಸಿದಂತೆ ಇನ್ನೂ ಯಾವ ನಿರ್ಧಾರ ತೆಗೆದುಕೊಂಡಿಲ್ಲ.
ಉಪ ಸಮಿತಿ ಸಭೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಭಾಗವಹಿಸಿದ್ದರು.