ಬಳ್ಳಾರಿ: ಪುರಸಭೆ ಚುನಾವಣೆ ವೇಳೆ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಭುಜತಟ್ಟಿ ಬಿಜೆಪಿ ಕಾರ್ಯಕರ್ತರಿಗೆ ಓಪನ್ ಚಾಲೆಂಜ್ ಮಾಡಿದ್ದ ವಿಡಿಯೋ ಭಾರಿ ವೈರಲ್ ಆಗಿತ್ತು.
ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಸ್ವತಃ ಶಾಸಕರ ಮಗ ಎಂಬುದು ಇದೀಗ ತಿಳಿದುಬಂದಿದೆ. ಅಲ್ಲದೇ ಅಪ್ಪನ ದರ್ಪಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಪುರಸಭೆ ಮುಂದೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಶಾಸಕ ಭೀಮಾನಾಯ್ಕ್ ಅವಾಜ್ ಹಾಕಿ, ಭುಜತಟ್ಟಿ ಬಿಜೆಪಿ ಕಾರ್ಯಕರ್ತರಿಗೆ ಸವಾಲು ಹಾಕಿದ್ದರು.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿರುವ ಭೀಮಾನಾಯ್ಕ್ ಪುತ್ರ ಅಶೋಕ್, ಅಪ್ಪನ ದರ್ಪಕ್ಕೆ ಶಹಬಾಸ್ ಗಿರಿ ನೀಡಿದ್ದಾರೆ. ಅಲ್ಲದೇ ಅವಾಜ್ ಹಾಕಿ, ಸವಾಲು ಹಾಕಿದ ಅಪ್ಪನ ವರ್ತನೆಯಿಂದ ಹೆಮ್ಮೆಯಾಗಿದೆ ಎಂದಿದ್ದಾರೆ.

