ರಾಮನಗರ: ದೇಶದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದ್ದು, 60 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ.
ಮೊದಲ 2 ಹಂತದಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲಾಗಿದ್ದು, ಮೂರನೇ ಹಂತದ ಲಸಿಕೆ ಅಭಿಯಾನದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ಪಡೆದುಕೊಳ್ಳುವ ಮೂಲಕ ಮಾದರಿಯಾಗಿದ್ದರು. ಇದೀಗ ಕರ್ನಾಟಕದಲ್ಲೂ ಸಹ ಜನಪ್ರತಿನಿಧಿಗಳು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ.
ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸಹ ಲಸಿಕೆ ಪಡೆದುಕೊಂಡಿದ್ದು, ಸಾರ್ವಜನಿಕರು ಯಾವುದೇ ಹಿಂಜರಿಕೆಯಿಲ್ಲದೆ ಲಸಿಕೆ ಪಡೆಯುವಂತೆ ಕರೆ ನೀಡಿದರು. ಸದ್ಯ ಲಾಕ್ಡೌನ್ ಬೇಡ ಎಂದ ಅವರು, ಒಂದೊಮ್ಮೆ ಪರಿಸ್ಥಿತಿ ಕೈಮೀರಿದರೆ ಅಂತಹ ಸಂದರ್ಭದಲ್ಲಿ 15 ದಿನಗಳ ಕಾಲ ಬೇಕಾದರೆ ಲಾಕ್ಡೌನ್ ಮಾಡಲಿ ಎಂದರು.