ನಾಪತ್ತೆಯಾಗಿ ಮೂರು ವರ್ಷಗಳಾದರೂ ಸಹ ಇನ್ನೂ ಸುಳಿವೇ ಸಿಗದಂತೆ ಆಗಿರುವ ಬೆಂಗಳೂರಿನ ಟೆಕ್ಕಿ ಕುಮಾರ್ ಅಜಿತಾಭ್ ಪ್ರಕರಣದ ತನಿಖೆ ಯಾಕೋ ಹಳ್ಳ ಹಿಡಿಯುವಂತೆ ಕಾಣುತ್ತಿದೆ.
ಕೇಂದ್ರ ತನಿಖಾ ದಳ (ಸಿಬಿಐ) ಸೇರಿದಂತೆ ಮೂರು ಏಜೆನ್ಸಿಗಳು ಈ ಪ್ರಕರಣದ ತನಿಖೆ ನಡೆಸುತ್ತಿವೆಯಾದರೂ ಈ ಸಂಬಂಧ ಯಾವುದೇ ಮಹತ್ವದ ಮುನ್ನಡೆ ಸಾಧಿಸುವಲ್ಲಿ ವಿಫಲವಾಗಿವೆ. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಜಿತಾಭ್ ವೈಟ್‌ಫೀಲ್ಡ್‌ನಲ್ಲಿ ವಾಸವಿದ್ದರು. ಅವರು ಡಿಸೆಂಬರ್ 18, 2017ರಂದು ನಾಪತ್ತೆಯಾಗಿದ್ದಾರೆ.
ಆನ್ಲೈನ್‌ನ ಕ್ಲಾಸಿಫೈಡ್ ಜಾಲತಾಣದಲ್ಲಿ ತಮ್ಮ ಕಾರನ್ನು ಮಾರಾಟ ಮಾಡಲು ಹೊರಟಿದ್ದ ಅಜಿತಾಭ್, ಸಂಭಾವ್ಯ ಕೊಳ್ಳುದಾರರನ್ನು ಭೇಟಿಯಾಗಲು ಹೊರಟಿದ್ದರು. ಆ ವೇಳೆ ಅವರು ಕಾಣೆಯಾಗಿದ್ದಾರೆ. ಐಐಎಂ-ಕೋಲ್ಕತ್ತಾದಲ್ಲಿ ಎಂಬಿಎ ಮಾಡುವ ತಮ್ಮ ಕನಸನ್ನು ಸಾಕಾರ ಮಾಡಿಕೊಳ್ಳಲು ಹಣ ಹೊಂದಿಸಲು ಅಜಿತಾಭ್ ತಮ್ಮ ಕಾರು ಮಾರಲು ಮುಂದಾಗಿದ್ದರು.