ಬೆಂಗಳೂರು: ಜನರ ಅಸಹಾಯಕತೆಯನ್ನು ವರವಾಗಿ ಮಾಡಿಕೊಂಡು ವಂಚಿಸುವ ಹಲವು ಜನ ಮಹಾ ನಗರದಲ್ಲಿದ್ದಾರೆ. ಈಗ ಕೋವಿಡ್ 19 ಸಂದರ್ಭದಲ್ಲಿ ಪ್ಲಾಸ್ಮಾ ಹೆಸರಲ್ಲಿ ಮೋಸ ಶುರುವಾಗಿದೆ.
ಪ್ಲಾಸ್ಮಾ ದಾನ ಮಾಡುವುದಾಗಿ ಹೇಳಿಕೊಂಡು ಬರುವವರು ಕೋವಿಡ್ ರೋಗಿಗಳ ಸಂಬಂಧಿಕರಿಂದ ಹಣ ಪಡೆದು ನಾಪತ್ತೆಯಾಗುತ್ತಿರುವ ಘಟನೆಗಳು ಬೆಂಗಳೂರಿನಲ್ಲಿ ನಡೆಯುತ್ತಿವೆ. ಪ್ಲಾಸ್ಮಾ ದಾನ ಮಾಡುವುದಾಗಿ ಕರೆ ಮಾಡಿದ ವ್ಯಕ್ತಿ ಗೂಗಲ್ ಪೇ ಮೂಲಕ 7 ಸಾವಿರ ರೂ. ಪಡೆದು, ನಾಪತ್ತೆಯಾದ ಬಗ್ಗೆ ಮೇರಿ ಮಿಶನ್ ನಲ್ಲಿ ಸ್ವಯಂಸೇವಕರಾಗಿರುವ ಮೊಹಮದ್ ಇಸ್ಮಾಯಿಲ್ ತಿಳಿಸಿದ್ದಾರೆ. ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೋಲಾರ ಮೂಲದ ಸುಷ್ಮಾ ಎಂಬುವವರಿಗೂ ಇಂಥದ್ದೇ ಅನುಭವ ಉಂಟಾಗಿದೆ.
ಪ್ಲಾಸ್ಮಾ ದಾನ ಮಾಡಿದವರಿಗೆ ತಲಾ 5 ಸಾವಿರ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ. ಆದರೆ, ಅದರ ಸಂಬಂಧ ಇದುವರೆಗೂ ಮಾರ್ಗಸೂಚಿಗಳು ಬಿಡುಗಡೆಯಾಗಿಲ್ಲ. ಅದರ ನಡುವೆ ಇಂಥ ಅಮಾನವೀಯ ಘಟನೆಗಳು ನಡೆಯುತ್ತಿವೆ.