ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುರುಗಲವಾಡಿ ಗ್ರಾಮದಲ್ಲಿ ನಡೆದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ತಾಂಡಾವೊಂದರ ಕೂಲಿ ಕಾರ್ಮಿಕರ ಕುಟುಂಬ ಕೊಪ್ಪದಲ್ಲಿ ನೆಲೆಸಿದ್ದು, ಕಬ್ಬು ಕಡಿಯಲು ಹೋಗುತ್ತಿತ್ತು. ಈ ಕುಟುಂಬಕ್ಕೆ ಸೇರಿದ ಬಾಲಕಿ ಕಬ್ಬಿನ ಗದ್ದೆಗೆ ತೆರಳಿದ್ದ ವೇಳೆ ಆರೋಪಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದು, ಒಪ್ಪದಿದ್ದಾಗ ಕೆಳಕ್ಕೆ ಬೀಳಿಸಿದ್ದಾನೆ. ಆಕೆ ಕಿರುಚಾಡಿದಾಗ ಕುಡುಗೋಲು ಬೀಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಘಟನೆಯ ನಂತರ ಕಬ್ಬಿನಗದ್ದೆಯಲ್ಲಿ ಅಡಗಿಕೊಂಡಿದ್ದ ಆರೋಪಿ ನಂತರದಲ್ಲಿ ತನಗೆ ಏನೂ ಗೊತ್ತಿಲ್ಲದಂತೆ ನಾಟಕವಾಡಿ ಪರಾರಿಯಾಗಿದ್ದಾನೆ. ಪೊಲೀಸರು ಅನುಮಾನದ ಮೇಲೆ ಆತನ ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ ಬಟ್ಟೆ ಮೇಲೆ ರಕ್ತದ ಕಲೆ ಕಂಡುಬಂದಿವೆ. ವಿಚಾರಿಸಿದಾಗ ಕೊಲೆ ವಿಚಾರ ಗೊತ್ತಾಗಿದೆ.
ಬಾಲಕಿ ಕುಟುಂಬದವರಿಗೆ ಕೊಪ್ಪ ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯಿಂದ 2.75 ಲಕ್ಷ ರೂಪಾಯಿ, ಸಮಾಜ ಕಲ್ಯಾಣ ಇಲಾಖೆಯಿಂದ 8.25 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.
ಬಾಲಕಿಯ ಕೊಲೆ ಮಾಹಿತಿ ತಿಳಿದ ಬಳ್ಳಾರಿ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ, ಕೂಲಿ ಕೆಲಸಕ್ಕಾಗಿ ಬರುವ ಕಾರ್ಮಿಕರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ.