ಬೆಂಗಳೂರು: ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಡಾ.ಕೆ. ಸುಧಾಕರ್ ಅವರನ್ನು ಪಕ್ಷದ ಕಚೇರಿಗೆ ಕರೆಸಿಕೊಂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಚರ್ಚೆ ನಡೆಸಿದ್ದಾರೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಕೋವಿಡ್ ಪರಿಸ್ಥಿತಿ ಕುರಿತಾಗಿ ಸಂತೋಷ್ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಪ್ರಧಾನಿ ಕಾರ್ಯಾಲಯ ರಾಜ್ಯದಲ್ಲಿನ ಕೋವಿಡ್ ನಿರ್ವಹಣೆ ಕುರಿತಂತೆ ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದು ಪಕ್ಷದಿಂದಲೂ ಸಲಹೆ-ಸೂಚನೆ ನೀಡಲಾಗುತ್ತಿದೆ. ಇದರ ಭಾಗವಾಗಿಯೇ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ಬಗ್ಗೆಯೂ ಸಂತೋಷ್ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಪಕ್ಷ ಸಂಘಟನೆಗೆ ಸಂಬಂಧಿಸಿದ ಅಧಿಕೃತ ಸಭೆಗಳಲ್ಲಿ ಮಾತ್ರ ಸಚಿವರೊಂದಿಗೆ ಚರ್ಚೆ ನಡೆಯುತ್ತಿದ್ದು ಈಗ ಸಚಿವರನ್ನೇ ಪಕ್ಷದ ಕಚೇರಿಗೆ ಕರೆಸಿಕೊಂಡು ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. ಸಚಿವ ಸಂಪುಟ ಪುನರ್ರಚನೆಯಾಗಬಹುದೆ ಎಂದೆಲ್ಲ ಚರ್ಚೆಯಾಗಿದೆ ಎನ್ನಲಾಗಿದೆ.