ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಅನ್ಲಾಕ್ ಮಾರ್ಗಸೂಚಿ ಅನ್ವಯ ಮೆಟ್ರೋ ರೈಲು ಸಂಚಾರ ಆರಂಭವಾಗಲಿದ್ದು, ಪ್ರಯಾಣಿಕರಿಗಾಗಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.
ಟೋಕನ್ ಮಾರಾಟ ನಿಷೇಧಿಸಲಾಗಿದ್ದು ಸ್ಮಾರ್ಟ್ ಕಾರ್ಡ್ ಇದ್ದವರಿಗೆ ಮಾತ್ರ ಅವಕಾಶ ನೀಡಲಾಗುವುದು. ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಿಸಿದ ಪ್ರಯಾಣಿಕರು ಅದನ್ನು ಬಳಸಲು ಮೊದಲು 60 ದಿನಗಳವರೆಗೆ ಅವಕಾಶ ನೀಡಲಾಗಿತ್ತು. ಈಗ 7 ದಿನಕ್ಕೆ ಸೀಮಿತಗೊಳಿಸಲಾಗಿದ್ದು, ರೀಚಾರ್ಜ್ ಮಾಡಿಸಿದ 7 ದಿನದ ಒಳಗೆ ಆ ಕಾರ್ಡ್ ಮೂಲಕ ಮೊದಲು ಪ್ರಯಾಣ ಮಾಡಬೇಕಿದೆ. ಸೆಪ್ಟಂಬರ್ 7 ರಿಂದ ಮೊಬೈಲ್ ಬಳಸುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಅಲ್ಲದೆ, ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಯುಪಿಎ, ಕ್ಯೂಆರ್ ಕೋಡ್ ಅಥವಾ ಪೇಟಿಎಂ ಮೂಲಕ ನಗದು ರಹಿತ ಪಾವತಿ ಮಾಡಿ ಸ್ಮಾರ್ಟ್ ಕಾರ್ಡ್ ಖರೀದಿಸಬಹುದು ಅಥವಾ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ.
ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸುವ ಒಂದು ಗಂಟೆಗೆ ಮುನ್ನ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿಸಿಕೊಳ್ಳಬೇಕು. ಅದಕ್ಕಾಗಿ ನಮ್ಮ ಮೆಟ್ರೋ ಆಪ್ ಅಥವಾ ಬಿಎಂಆರ್ಸಿಎಲ್ ವೆಬ್ಸೈಟ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ಸೆಪ್ಟಂಬರ್ 7ರಿಂದ ನೇರಳೆ ಮಾರ್ಗದಲ್ಲಿ ಮತ್ತು ಸೆಪ್ಟೆಂಬರ್ 9 ರಿಂದ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದ್ದು ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ಸೇವೆ ಇರುತ್ತದೆ. ಇನ್ನು ಕಂಟೈನ್ ಮೆಂಟ್ ವಲಯದ ವ್ಯಾಪ್ತಿಯ ನಿಲ್ದಾಣಗಳಲ್ಲಿ ಪ್ರವೇಶ ಅಥವಾ ನಿರ್ಗಮನ ದ್ವಾರ ತೆರೆಯುವುದಿಲ್ಲ. ಸಮೀಪದ ನಿಲ್ದಾಣಗಳಲ್ಲಿ ಹತ್ತಲು ಅಥವಾ ಇಳಿಯಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ.