ಬೆಂಗಳೂರು: ಗಂಡ ಮತ್ತು ಆತನ ಮನೆಯವರ ವಂಚನೆ, ಕಿರುಕುಳದಿಂದ ಮನನೊಂದ ಮಹಿಳೆಯೊಬ್ಬರು ಬ್ಯಾಡರಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಗಂಡನಿಗೆ ಮಕ್ಕಳಾಗುವುದಿಲ್ಲ ಎನ್ನುವ ವಿಷಯ ಮುಚ್ಚಿಟ್ಟು ಮದುವೆ ಮಾಡಲಾಗಿದ್ದು, ಮಾವ ತನ್ನೊಂದಿಗೆ ಸಂಸಾರ ನಡೆಸುವಂತೆ ಸೊಸೆಗೆ ಪೀಡಿಸಿದ್ದಾನೆ. ಗಂಡ ಗರ್ಭಕೋಶಕ್ಕೆ ಹಾನಿಯಾಗುವ ಮಾತ್ರೆ ನುಂಗಿಸಿ ಚಿತ್ರಹಿಂಸೆ ನೀಡಿದ್ದಾನೆ. ಇದರಿಂದಾಗಿ ನೊಂದ ಮಹಿಳೆ ಗಂಡ ಹಾಗೂ ಆತನ ಕುಟುಂಬದವರ ವಿರುದ್ಧ ದೂರು ನೀಡಿದ್ದಾಳೆ.
2014 ರ ಮಾರ್ಚ್ ನಲ್ಲಿ ಬೆಂಗಳೂರು ಸುಂಕದಕಟ್ಟೆಯ ಕಲ್ಯಾಣ ಮಂಟಪವೊಂದರಲ್ಲಿ ಬಿಇಎಲ್ ನಿವಾಸಿಯಾಗಿರುವ ವ್ಯಕ್ತಿಯ ದ್ವಿತೀಯ ಪುತ್ರನೊಂದಿಗೆ ಮದುವೆ ನೆರವೇರಿದೆ. ಮದುವೆ ಸಂದರ್ಭದಲ್ಲಿ 6 ಲಕ್ಷ ರೂಪಾಯಿ ನಗದು, 104 ಗ್ರಾಂ ಚಿನ್ನಾಭರಣ ಕೊಡಲಾಗಿತ್ತು.
ಮೊದಲ ರಾತ್ರಿಯೇ ಪತ್ನಿಯನ್ನು ಮುಟ್ಟದ ಪತಿರಾಯನಿಗೆ ಈ ಬಗ್ಗೆ ಪ್ರಶ್ನಿಸಿದಾಗ ಲಿಂಗ ದೌರ್ಬಲ್ಯ ಇರುವುದು ಗೊತ್ತಾಗಿದೆ. ಆಸ್ಪತ್ರೆಗೆ ಕರೆದೊಯ್ದು ಶಸ್ತ್ರ ಚಿಕಿತ್ಸೆ ಮಾಡಿಸಿದ್ದು, ನಂತರವೂ ಆತನಿಗೆ ಮಕ್ಕಳಾಗುವುದಿಲ್ಲ ಎನ್ನುವುದು ಗೊತ್ತಾಗಿದೆ. ನಂತರದಲ್ಲಿ ಪತ್ನಿಗೆ ಹಿಂಸೆ ನೀಡಲು ಆರಂಭಿಸಿದ ಪತಿರಾಯ ಪತ್ನಿಯ ಗರ್ಭಕೋಶಕ್ಕೆ ಹಾನಿಯಾಗುವ ಮಾತ್ರೆ ನುಂಗಿಸಿ ಕಿರುಕುಳ ನೀಡಿದ್ದಾನೆ.
ಬಳಿಕ ಮಾವನು ಸೇರಿಕೊಂಡು ಮಗನಿಂದ ನಿನಗೆ ಮಕ್ಕಳಾಗುವುದಿಲ್ಲ. ನನ್ನೊಂದಿಗೆ ಸಂಸಾರ ಮಾಡು ಎಂದು ಪೀಡಿಸಿದ್ದಾನೆ. ಮಹಿಳೆಗೆ ಗಂಡನ ಮನೆಯವರು ಕಿರುಕುಳ ನೀಡಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗಂಡ ಹಾಗೂ ಆತನ ಕುಟುಂಬದವರ ವಿರುದ್ಧ ಬ್ಯಾಡರಹಳ್ಳಿ ಠಾಣೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.