ಹಾಸನ: ಮ್ಯಾಟ್ರಿಮೋನಿ ಸೈಟ್ ಮೂಲಕ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿದ್ದ ಮಹಿಳೆ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದ್ದು ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಚಲನಚಿತ್ರಗಳಲ್ಲಿ ಸಹ ಕಲಾವಿದನಾಗಿರುವ ಹಾಸನದ ವಿಜಯನಗರ ಬಡಾವಣೆಯ ಪರಮೇಶ್ ಹಳೇಬೀಡು ಸಮೀಪ ನಾಗರಾಜಪುರದಲ್ಲಿ ಜಮೀನು ಗುತ್ತಿಗೆ ಪಡೆದು ಶುಂಠಿ ಬೆಳೆದಿದ್ದಾರೆ. ಲಾಕ್ಡೌನ್ ಕಾರಣದಿಂದ ಅವರು ಊರಿನಲ್ಲಿ ಉಳಿದುಕೊಂಡಿದ್ದಾರೆ. ಅವರಿಗೆ ಪರಿಚಯವಾಗಿದ್ದ ಬೆಂಗಳೂರಿನ ಮಹಿಳೆ ಲಕ್ಷ್ಮಿ ಖಾತೆಗೆ ಹಣ ಹಾಕಿಸಿಕೊಂಡು ವಂಚಿಸಿದ್ದಾಳೆ.
ಈ ಹಿಂದೆ ಮ್ಯಾಟ್ರಿಮೋನಿ ಸೈಟ್ ಮೂಲಕ ಲಕ್ಷ್ಮಿ ಪರಿಚಯವಾಗಿದ್ದಾಳೆ. ಬೆಂಗಳೂರಿನ ಯಲಹಂಕದಲ್ಲಿ ಪರಮೇಶ್ ಅವರನ್ನು ಭೇಟಿಯಾಗಿ ಮದುವೆಯಾಗುವುದಾಗಿ ತಿಳಿಸಿದ್ದಾಳೆ. ಅನಾಥೆಯಾಗಿರುವ ತಾನು ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡಿದ್ದು, ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಚಿಕ್ಕಮ್ಮ ಪೂರ್ಣ ಸಂಬಳ ಪಡೆದುಕೊಳ್ಳುತ್ತಾರೆ. ಎಂದು ನಂಬಿಸಿ ಭೇಟಿಯ ದಿನವೇ 5 ಸಾವಿರ ರೂಪಾಯಿ ಪಡೆದುಕೊಂಡಿದ್ದಾಳೆ.
ಪರಮೇಶ್ ಜೊತೆಗೆ ಫೋನ್ನಲ್ಲಿ ಸಂಪರ್ಕದಲ್ಲಿದ್ದ ಆಕೆ ಕಷ್ಟದಲ್ಲಿರುವುದಾಗಿ ಹೇಳಿ 2019 ರ ಡಿಸೆಂಬರ್ 2020ರ ಜೂನ್ ವರೆಗೆ 6 ಲಕ್ಷ ರೂಪಾಯಿ ಹಣವನ್ನು ತನ್ನ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾಳೆ. ಬಳಿಕ ಮದುವೆಯಾಗುವುದಿಲ್ಲ ಎಂದು ಹೇಳಿ ಫೋನ್ ಮಾಡದಂತೆ ತಾಕೀತು ಮಾಡಿದ್ದಾಳೆ. ಫೋನ್ ಮಾಡಿದರೆ ಅತ್ಯಾಚಾರದ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾಳೆ.
ಹಣ ಕಳೆದುಕೊಂಡು ಕಂಗಾಲಾದ ಪರಮೇಶ್ ಹಾಸನ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ಮಾರ್ಗದರ್ಶನದಂತೆ ಲಕ್ಷ್ಮಿಯನ್ನು ಹಾಸನಕ್ಕೆ ಕರೆಸಿದ್ದು ಆಕೆಯನ್ನು ಮತ್ತು ಆಕೆಯ ಜೊತೆಗಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಸುಮಾರು 10 ಮಂದಿಗೆ ಮದುವೆಯಾಗುವುದಾಗಿ ನಂಬಿಸಿ 2 ಕೋಟಿಗೂ ಅಧಿಕ ಹಣ ಪಡೆದುಕೊಂಡಿರುವ ವಿಚಾರ ಗೊತ್ತಾಗಿದೆ. ಆಕೆಯನ್ನು ಹಾಸನ ಪೊಲೀಸರು ಬಂಧಿಸಿದ ಅನೇಕರು ಲಕ್ಷ್ಮಿಯಿಂದ ವಂನೆಗೊಳಗಾದ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.