ಬೆಂಗಳೂರು: ಕೊರೋನಾ ಲಾಕ್ ಡೌನ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಹೊಸ ಮುಹೂರ್ತ ನಿಗದಿಯಾಗಿದೆ.
ಜುಲೈ 23, 26, 29 ಹಾಗೂ ಆಗಸ್ಟ್ 6, 10, 14, 17 ರಂದು ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗುವುದು. ಕಳೆದ ಮಾರ್ಚ್ ನಲ್ಲಿ ಮದುವೆಗೆ ನೊಂದಾಯಿಸಿದ ವಧು, ವರರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಒಪ್ಪಿಗೆ ಪತ್ರ ಪಡೆದು ನಿಗದಿತ ದಿನದಂದು ಸಾಮೂಹಿಕ ಮದುವೆ ಆಯೋಜಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸುಮಾರು 1500 ಕ್ಕೂ ಹೆಚ್ಚು ಜೋಡಿಗಳು ನೋಂದಣಿ ಮಾಡಿಸಿದ್ದು ವರನಿಗೆ ಹಾರ ಬಟ್ಟೆ ಖರೀದಿಗೆ 5000 ರೂ. ಪ್ರೋತ್ಸಾಹ ಧನ ನೀಡಲಾಗುವುದು. ವಧುವಿಗೆ ಬಟ್ಟೆ ಖರೀದಿಗೆ 10,000 ರೂ. ಮತ್ತು ತಾಳಿಗೆ 40 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಮದುವೆ ದಿನವೇ ವಧು-ವರರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುವುದು.
ಮುಜರಾಯಿ ಇಲಾಖೆ ಎ ದರ್ಜೆ ದೇವಾಲಯಗಳಲ್ಲಿ ಮದುವೆ ನಡೆಯಲಿದೆ. ಕೊರೋನಾ ಇನ್ನೂ ಒಂದು ತಿಂಗಳು ಸಮಯವಿದ್ದು, ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಪರಿಸ್ಥಿತಿ ನೋಡಿಕೊಂಡು ಜನಸಂದಣಿ ಉಂಟಾಗದಂತೆ ಮದುವೆ ನೆರವೇರಿಸಲು ಯೋಜಿಸಲಾಗಿದೆ ಎನ್ನಲಾಗಿದೆ.