ದೇವಸ್ಥಾನಗಳಲ್ಲಿ ತೀರ್ಥ ಕೊಡುವುದಕ್ಕೂ ಅರ್ಚಕರ ಜಾಗಕ್ಕೀಗ ಯಂತ್ರ ಬಂದಿದೆ.
ಕೊರೋನಾ ಬಂದದ್ದೇ ಬಂದಿದ್ದು, ಎಲ್ಲದರಿಂದಲೂ ಅಂತರ ಕಾಯ್ದುಕೊಳ್ಳುವ ದುಃಸ್ಥಿತಿ ಬಂದಿದೆ.
ಲಾಕ್ ಡೌನ್ ಸಡಿಲಗೊಳ್ಳುತ್ತಲೇ ಇದ್ದು, ಕೊರೋನಾ ಕೂಡ ಬಿಗಿಯಾಗುತ್ತಾ ಹೋಗುತ್ತಿದೆ.
ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶಕ್ಕೆ ಸರ್ಕಾರ ಅನುಮತಿ ಕೊಟ್ಟಿದ್ದು, ಪೂಜೆ, ದರ್ಶನಕ್ಕಷ್ಟೇ ಅವಕಾಶ ನೀಡಿದೆ. ತೀರ್ಥ-ಪ್ರಸಾದಾದಿಗಳನ್ನು ಕೊಡುವಂತಿಲ್ಲ.
ಹೀಗಾಗಿ ಮಂಗಳೂರಿನ ದೇವಳದಲ್ಲಿ ಸೂಕ್ಷ್ಮಸಂವೇದನೆಯಿಂದ ಕಾರ್ಯ ನಿರ್ವಹಿಸುವ ತಂತ್ರಜ್ಞಾನ ಆಧಾರಿತ ತೀರ್ಥ ವಿತರಣಾ ಯಂತ್ರ ಅಳವಡಿಸಲಾಗಿದೆ. ಅಸಿಸ್ಟೆಂಟ್ ಪ್ರೊಫೆಸರ್ ಸಂತೋಷ್ ಎಂಬವರು ಇದನ್ನು ಆವಿಷ್ಕರಿಸಿದ್ದು, ಕೇವಲ 2700 ರೂ. ಇದರ ಬೆಲೆ.
ದೇವರ ದರ್ಶನ ಪಡೆದ ನಂತರ ಭಕ್ತರು, ಯಂತ್ರದ ಬಳಿ ಕೈಯಿಟ್ಟರೆ ಸಾಕು ಒಂದು ಉದ್ಧರಣೆಯಷ್ಟು ತೀರ್ಥ ಬಂದು ಬೀಳುತ್ತದೆ. ಉಪಕರಣವನ್ನು ಮುಟ್ಟುವ ಅಗತ್ಯವೂ ಇಲ್ಲ. ಅರ್ಚಕರೂ ತೀರ್ಥ ವಿತರಿಸುವ ಆವಶ್ಯಕತೆಯೂ ಇಲ್ಲ. ಅಭಿಷೇಕಾದಿಗಳ ಬಳಿಕ ಒಮ್ಮೆ ಅದರಲ್ಲಿ ತೀರ್ಥ ಹಾಕಿಟ್ಟರೆ ಮುಗಿಯಿತು. ಇದರಿಂದ ಅಂತರ, ಶುಚಿತ್ವ, ಸ್ಪರ್ಶರಹಿತ ವ್ಯವಸ್ಥೆಗಳನ್ನು ಕಾಪಾಡಿದಂತೆಯೂ ಆಗುತ್ತದೆ.