ಆತ ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ವಿಧಿಯ ಬರಹವೇ ಬೇರೆಯಾಗಿತ್ತು. ಇನ್ನೇನು ಗೆದ್ದೇ ಗೆಲ್ಲುತ್ತೇನೆ ಎಂದುಕೊಂಡಿದ್ದ ಆತ ಸಾವಿಗೀಡಾಗಿದ್ದಾರೆ.
ಈ ಘಟನೆ ನಡೆದಿರೋದು ಬಂಟ್ವಾಳ ತಾಲೂಕಿನ ಕಾವಳಮುಡೂರು ಗ್ರಾಮದಲ್ಲಿ ಈ ಗ್ರಾಮದ ಅರ್ಗತ್ಯಾರು ನಿವಾಸಿ ಜಯಂತ ಪ್ರಭು ಮೃತ ದುರ್ದೈವಿ.
ಹೌದು, ಬಾಯಿ ಹುಣ್ಣಾಗಿದೆ ಎಂದು ಅದಕ್ಕೆ ಸಂಬಂಧಪಟ್ಟ ಔಷಧಿ ಬದಲು ಖಾಲಿ ಬಾಟಲಿಯಲ್ಲಿ ತುಂಬಿಟ್ಟಿದ್ದ ಕ್ರಿಮಿನಾಶಕ ಕುಡಿದು ಸಾವನ್ನಪ್ಪಿದ್ದಾರೆ. ಆ ಕ್ರಿಮಿನಾಶಕವನ್ನು ಅಲ್ಪ ಪ್ರಮಾಣದಲ್ಲಿ ಕುಡಿದಿದ್ದರಿಂದ ತಕ್ಷಣವೇ ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಹಾಗಾಗಿ ಮತದಾನದ ದಿನವೂ ಕೂಡ ಮತದಾನ ಮಾಡಿದ್ದಾರೆ. ನಂತರ ಅಸ್ವಸ್ಥರಾಗಿದ್ದಾರೆ. ತಕ್ಷವೇ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಕೂಡ ನೀಡುತ್ತಿದ್ದರಂತೆ.
ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮಧ್ಯಾಹ್ನದ ವೇಳೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು ಈ ಬಗ್ಗೆ ಅವರ ಪುತ್ರ ದೂರು ನೀಡಿದ್ದು, ಅದರಂತೆ ಪುಂಜಾಲಕಟ್ಟೆ ಪೊಲೀಸರು ಕೇಸು ದಾಖಲಿಸಿದ್ದಾರೆ ಎನ್ನಲಾಗಿದೆ. ಇನ್ನು ಇವರ ಅಗಲಿಕೆಗೆ ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಜಿ.ಪಂ. ಸದಸ್ಯ ಬಿ.ಪದ್ಮಶೇಖರ ಜೈನ್ ಕಂಬನಿ ಮಿಡಿದಿದ್ದಾರೆ.