
ಮಂಗಳೂರು ಹೊರವಲಯದ ಗುರುಪುರದ ಬಂಗ್ಲೆಗುಡ್ಡೆ ಭಾರಿ ಮಳೆಯಿಂದ ಕುಸಿದಿದ್ದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆಸಲಾಗಿದೆ.
ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸಿಎಂ ಯಡಿಯೂರಪ್ಪ ಸಚಿವರು, ಅಧಿಕಾರಿಗಳಿಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದ್ದು, ಮಕ್ಕಳ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.
ಗುಡ್ಡದಮೇಲೆ ಮತ್ತು ಅಂಚಿನಲ್ಲಿರುವ ನಿವಾಸಿಗಳನ್ನು ಸ್ಥಳಾಂತರಗೊಳಿಸಲಾಗಿದೆ. ಅವರಿಗೆ ಬೇರೆ ಕಡೆ ಮನೆ ನಿರ್ಮಿಸಿಕೊಡಲಾಗುವುದು. ಮಕ್ಕಳ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರೆಸಲಾಗಿದೆ. ಅಧಿಕಾರಿಗಳ ತಂಡ ಸ್ಥಳದಲ್ಲಿದ್ದು ನಿಗಾ ವಹಿಸಿದೆ ಎಂದು ಹೇಳಿದ್ದಾರೆ.
ಇನ್ನೂ ಐದಾರು ಮನೆಗಳು ಕುಸಿಯುವ ಭೀತಿಯಲ್ಲಿದ್ದು, ಎಲ್ಲರನ್ನು ಸ್ಥಳಾಂತರ ಮಾಡಲಾಗಿದೆ. ಸ್ಥಳದಲ್ಲಿ ಪೊಲೀಸರು, ಎನ್.ಡಿ.ಆರ್.ಎಫ್. ತಂಡ, ಅಗ್ನಿಶಾಮಕದಳ ಸಿಬ್ಬಂದಿ, ಸ್ಥಳೀಯ ನಿವಾಸಿಗಳು, ವಿವಿಧ ಇಲಾಖೆ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಮಕ್ಕಳ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ.