ಮಂಗಳೂರಿನ ಹೊರವಲಯದ ಗುರುಪುರ ಬಂಗ್ಲೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ್ದು ಅವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆಸಲಾಗಿದೆ.
ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಯು.ಟಿ. ಖಾದರ್ ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅಗ್ನಿಶಾಮಕದಳದ ಸಿಬ್ಬಂದಿ, ಎನ್.ಡಿ.ಆರ್.ಎಫ್., ಪೊಲೀಸರು, ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗುಡ್ಡ ಕುಸಿತದ ಸಂದರ್ಭದಲ್ಲಿ ಮೂರು ಮನೆಗಳಲ್ಲಿ 10 ಜನರಿದ್ದು ಒಂದು ಮನೆಯಲ್ಲಿದ್ದ ಇಬ್ಬರು ಬಾಲಕರು ಮಣ್ಣಿನಡಿ ಸಿಲುಕಿದ್ದಾರೆ. ಗುಡ್ಡದ ಮೇಲೆ ಸುಮಾರು 25 ಮನೆಗಳಿದ್ದು ಐದಾರು ಮನೆಗಳು ಕುಸಿಯುವ ಭೀತಿಯಲ್ಲಿವೆ.
ಈಗಾಗಲೇ ಗುಡ್ಡದ ಅಂಚಿನಲ್ಲಿದ್ದ ನಾಲ್ಕು ಮನೆಗಳ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಸುಮಾರು 30 ಅಡಿಯಷ್ಟು ಮಣ್ಣು ಕುಸಿದಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಾಗಿದೆ. ಗುಡ್ಡ ಕುಸಿಯುವ ವೇಳೆ ಮನೆಯೊಳಗಿಂದ ಹಲವರು ಓಡಿ ಬಂದಿದ್ದಾರೆ. ಈ ವೇಳೆ ಇಬ್ಬರು ಮಕ್ಕಳು ಮನೆಯೊಳಗೆ ಉಳಿದುಕೊಂಡಿದ್ದಾರೆ. ನಾಲ್ಕು ವರ್ಷದ ಮಗು ಸೇರಿದಂತೆ ಇಬ್ಬರು ಮನೆಯೊಳಗೆ ಸಿಲುಕಿದ್ದು ಮಕ್ಕಳ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಹೇಳಲಾಗಿದೆ.