ಬೆಂಗಳೂರು: ಕೊರೊನಾ ಸೋಂಕಿನಿಂದ ಇತ್ತೀಚೆಗಷ್ಟೇ ಗುಣಮುಖರಾಗಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಪತ್ನಿಯ ಎದುರೇ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ರವೀಂದ್ರನಾಥ್ (47) ಮೃತ ವ್ಯಕ್ತಿ. ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದ ರವೀಂದ್ರನಾಥ್ ಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕುಟುಂಬ ಸದಸ್ಯರು ರವೀಂದ್ರನಾಥ್ ಅವರನ್ನು ಬೆಂಗಳೂರಿನ ನ್ಯೂ ಮೆಡ್ ಡಯಾಗ್ನೊಸ್ಟಿಕ್ ಸೆಂಟರ್ ಗೆ ಕರೆತಂದಿದ್ದರು. ರೋಗಿಯ ಸ್ಥಿತಿ ಗಂಭೀರವಾಗಿದ್ದರೂ ಯಾವೊಬ್ಬ ವೈದ್ಯರೂ ಚಿಕಿತ್ಸೆ ನೀಡಲು ಮುಂದಾಗಿಲ್ಲ. ಕುಟುಂಬದವರು ಗಲಾಟೆ ಆರಂಭಿಸುತ್ತಿದ್ದಂತೆ ಎಂಆರ್ ಐ ಸ್ಕ್ಯಾನಿಂಗ್ ವಾರ್ಡ್ ಗೆ ಕರೆದೊಯ್ದಿದ್ದಾರೆ. ಉಸಿರಾಟ ಸಮಸ್ಯೆ ತೀವ್ರಗೊಂಡರೂ ಆಕ್ಸಿಜನ್ ಪೈಪ್ ಕನೆಕ್ಟ್ ಮಾಡಿಲ್ಲ. ಕೊನೇ ಗಳಿಗೆಯಲ್ಲಿ ಕನೆಕ್ಟ್ ಮಾಡಲು ಯತ್ನಿಸಿದ್ದಾರೆ ಆದರೆ ಪತ್ನಿಯ ಕಣ್ಣೆದುರೇ ರವೀಂದ್ರನಾಥ್ ಪ್ರಾಣಬಿಟ್ಟಿದ್ದಾರೆ.
ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಸಿಡಿದೆದ್ದಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.