ಮಹಾಕೂಟ ಪ್ರಾಚೀನ ದೇವಾಲಯಗಳನ್ನೊಳಗೊಂಡ ಕ್ಷೇತ್ರವಾಗಿದ್ದು, ದಕ್ಷಿಣದ ಕಾಶಿ ಎಂದು ಪ್ರಸಿದ್ಧವಾಗಿದೆ. ಚಾಲುಕ್ಯರ ಕಾಲದ ಪ್ರಮುಖ ಕ್ಷೇತ್ರವಾಗಿದ್ದ ಮಹಾಕೂಟದಲ್ಲಿ ಹಲವಾರು ದೇವಾಲಯಗಳಿವೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡ್ತಾರೆ.
ಬಾದಾಮಿಯಿಂದ ಸ್ವಲ್ಪ ದೂರದಲ್ಲೇ ಇರುವ ಈ ಸ್ಥಳದಲ್ಲಿ ಅಮೂಲ್ಯವಾದ ಮತ್ತು ವಿರಳವಾದ ಗಿಡಮೂಲಿಕೆ ಸಂಪತ್ತು ಇದೆ. ಸುತ್ತಲಿನ ಪ್ರದೇಶ ಬೆಟ್ಟ ಗುಡ್ಡಗಳು ಹಸಿರಿನಿಂದ ಕೂಡಿದೆ. ಇವುಗಳ ನಡುವೆ ದೇವಾಲಯಗಳು ಕಾಣಸಿಗುತ್ತವೆ.
ಮಹಾಕೂಟದಲ್ಲಿ ದೇವಾಲಯಗಳ ರೀತಿಯಲ್ಲೇ ವಿಶೇಷತೆಯನ್ನು ಹೊಂದಿರುವ ಹೊಂಡವಿದೆ. ಅದು ಎಂದಿಗೂ ಬತ್ತಿಲ್ಲ. ಈ ಹೊಂಡದೊಳಗೆ ಲಿಂಗವಿದ್ದು, ಈಜು ಬರುವವರು ನೀರಲ್ಲಿ ಮುಳುಗಿ ದರ್ಶನ ಪಡೆಯುತ್ತಾರೆ.
ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳನ್ನು ಒಂದೇ ಮಾದರಿಯಲ್ಲಿ ನಿರ್ಮಿಸಲಾಗಿದ್ದು, ಹಸಿರಿನಿಂದ ಆವೃತ್ತವಾದ ಬೆಟ್ಟಗಳ ಸಾಲುಗಳ ನಡುವೆ ಈ ದೇವಾಲಯಗಳು ಕಂಗೊಳಿಸುತ್ತವೆ. ಅಗಸ್ತ್ಯೇಶ್ವರ, ವೀರಭದ್ರೇಶ್ವರ ಮೊದಲಾದ ಚಿಕ್ಕ ದೇವಾಲಯಗಳು ಕೂಡ ಇವೆ.
ಶಿವನ ಭಕ್ತರಿಗೆ ಇದೊಂದು ಪುಣ್ಯಸ್ಥಳವಾಗಿದೆ. ದಕ್ಷಿಣ ಭಾರತದ ಕಾಶಿ ಎಂದೂ ಮಹಾಕೂಟವನ್ನು ಕರೆಯಲಾಗುತ್ತದೆ. ಭಕ್ತರು ಮಾತ್ರವಲ್ಲದೇ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಮಹಾಲಿಂಗ ದೇವಾಲಯ ಮತ್ತು ಸಂಗಮೇಶ್ವರ ದೇವಾಲಯದ ಹೊರಭಾಗದಲ್ಲಿ ದೇವರ ಕೆತ್ತನೆಗಳು ಗಮನ ಸೆಳೆಯುತ್ತವೆ.
ಮಹಾಕೂಟ ಸುತ್ತಮುತ್ತ ಇನ್ನೂ ಹಲವು ನೋಡಬಹುದಾದ ಸ್ಥಳಗಳು ಇವೆ. ಅವುಗಳ ಬಗ್ಗೆ ಮೊದಲೇ ಮಾಹಿತಿ ಪಡೆದುಕೊಂಡು ಹೋದಲ್ಲಿ ಎಲ್ಲಾ ಸ್ಥಳಗಳನ್ನು ನೋಡಬಹುದು. ಇನ್ನು ಬಾದಾಮಿ ಹಾಗೂ ಮಹಾಕೂಟದಲ್ಲಿ ಉಳಿಯುವ ವ್ಯವಸ್ಥೆ ಇದೆ. ನೀವೂ ಒಮ್ಮೆ ದಕ್ಷಿಣದ ಕಾಶಿ ಮಹಾಕೂಟವನ್ನು ನೋಡಿ ಬನ್ನಿ