
ವಿಜಯಪುರ ಜಿಲ್ಲೆಯ ಐಹೊಳೆ, ಬಾದಾಮಿ ಹಾಗೂ ಪಟ್ಟದಕಲ್ಲಿನಲ್ಲಿ ಕ್ರಿ.ಶ. 5 ನೇ ಶತಮಾನದಿಂದ 8 ನೇ ಶತಮಾನದವರೆಗಿನ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ದೇವಾಲಯಗಳು ನಿರ್ಮಾಣವಾಗಿವೆ. ಬಾದಾಮಿಯ ಸುತ್ತಮುತ್ತ ಇರುವ ದೇವಾಲಯಗಳಲ್ಲಿ ಮಹಾಕೂಟದ ಶಿವ ದೇವಾಲಯ ಪ್ರಮುಖವಾದುದು. ಈ ದೇವಾಲಯ ತನ್ನ ಕಲಾತ್ಮಕತೆ, ವಾಸ್ತುಶಿಲ್ಪದಿಂದಾಗಿ ಗಮನ ಸೆಳೆಯುತ್ತದೆ. ದಕ್ಷಿಣ ಭಾರತದ ವಿಶಿಷ್ಟವಾದ ವಿಮಾನ ಗೋಪುರಕ್ಕೆ ಇದು ಹೆಸರಾಗಿದೆ.
ಬಾದಾಮಿಯ ಸಮೀಪದಲ್ಲಿನ ಮಹಾಕೂಟ ಶಿವ ದೇವಾಲಯ ಶೈವರು ಮತ್ತು ಶಾಕ್ಯ ಸಂಪ್ರದಾಯದ ಭಕ್ತಿ ಕೇಂದ್ರವಾಗಿ ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿದೆ. ಪುರಾಣದ ಕತೆಗಳ ಪ್ರಕಾರ, ವಾತಾಪಿ ಮತ್ತು ಇಲ್ವಲ ಎಂಬ ರಾಕ್ಷಸ ಸಹೋದರರನ್ನು ಅಗಸ್ತ್ಯ ಮುನಿಗಳು ಸಂಹಾರ ಮಾಡಿದ್ದು ಇದೇ ಸ್ಥಳದಲ್ಲಿ ಎನ್ನಲಾಗಿದೆ.
ಈ ಗ್ರಾಮಕ್ಕೆ ಸಮೀಪದಲ್ಲೇ ಕೆಲವು ದೇವಾಲಯಗಳ ಸಮೂಹವಿದೆ. ಇವುಗಳಲ್ಲಿ ಹೆಚ್ಚಿನವು ಶಿವ ದೇವಾಲಯಗಳಾಗಿದ್ದು, ಕೆಲವು ನಗರ ಶೈಲಿಯಲ್ಲಿ ಮತ್ತೆ ಕೆಲವು ದ್ರಾವಿಡ ಶೈಲಿಯಲ್ಲಿವೆ. ಅವುಗಳಲ್ಲಿ ಪ್ರಮುಖವಾದುದು ಮಹಾಕೂಟೇಶ್ವರ ದೇವಾಲಯ.
ಪೂರ್ವಾಭಿಮುಖವಾಗಿರುವ ದೇವಾಲಯ ಇದಾಗಿದ್ದು, ಅರ್ಧ ಮಂಟಪ, ಮುಖ ಮಂಟಪ, ಗರ್ಭ ಮಂಟಪ, ಗರ್ಭಗೃಹ, ವಿಮಾನ, ಕಳಶ ಎಲ್ಲವೂ ದ್ರಾವಿಡ ಶೈಲಿಯಲ್ಲಿವೆ. ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ಶೈವ ಮಾದರಿಯ ದ್ವಾರ ಪಾಲಕರಿದ್ದಾರೆ. ದೇವಾಲಯದ ಹೊರಗೋಡೆಯ ಮೇಲೆ ಚಾಲುಕ್ಯರ ಕಾಲದ ಶಿಲ್ಪಿಗಳು ನಿರ್ಮಿಸಿದ ಕಲಾಕೃತಿಗಳಿವೆ. ಅರ್ಧನಾರೀಶ್ವರ, ಭೂಮಿಯನ್ನು ರಕ್ಷಿಸುವ ವರಾಹ ಮೊದಲಾದ ಕಲಾಕೃತಿಗಳು ಗಮನಸೆಳೆಯುತ್ತವೆ.
ದೊಡ್ಡ ಗಂಟಾಹಾರ ತೊಟ್ಟಿರುವ ನಂದಿಯ ವಿಗ್ರಹ ಸುಂದರವಾಗಿದೆ. ಹೊಯಿಗೆ ಕಲ್ಲಿನ ಕಂಬದಲ್ಲಿ ಮಹಾಕೂಟೇಶ್ವರ ದೇವರ ಸಂಪತ್ತು ಮತ್ತು ವೈಭವ ತಿಳಿಸುವ ಶಾಸನ ಇದೆ.
ದೇವಾಲಯದ ಒಳಗಿನ ಕಂಬದಲ್ಲಿ ಹಲವು ಶಾಸನಗಳಿದ್ದು, ಚಾಲುಕ್ಯ ದೊರೆ ವಿಜಯಾದಿತ್ಯನ ಉಪ ಪತ್ನಿ ವೀಣಾಪೊತಿ ದೇವಾಲಯಕ್ಕೆ ಭೂಮಿ, ಚಿನ್ನಾಭರಣ ದಾನ ಮಾಡಿದ್ದ ಬಗ್ಗೆ ಉಲ್ಲೇಖವಿದೆ. ದೊರೆ ಮಂಗಳೇಶನು ಬಾದಾಮಿ ಮತ್ತು ಐಹೊಳೆಯ ಸುತ್ತ ಭೂಮಿಯನ್ನು ನೀಡಿದ ಪ್ರಸ್ತಾಪವಿದೆ.
ದೇವಾಲಯದ ಸಂಕೀರ್ಣದ ನಡುವೆ ಪುಷ್ಕರಣಿ ಇದೆ. ಮಧ್ಯದಲ್ಲಿ ಐದು ಮುಖಗಳ ಪಂಚಮುಖ ಲಿಂಗವಿದೆ. ಶಿವರಾತ್ರಿಯಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಅಪಾರ ಸಂಖ್ಯೆಯ ಭಕ್ತರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಬಾದಾಮಿಯಿಂದ ಸ್ಥಳೀಯ ಸಾರಿಗೆ ಸೌಕರ್ಯವಿದೆ. ಪ್ರವಾಸಿಗರು ತಂಗಲು ವಸತಿ ಗೃಹ ಇದೆ.