
ಯಾದಗಿರಿ: ಪ್ರೀತಿಸಿ ಮದುವೆಯಾಗಿದ್ದ ಪ್ರೇಮಿಗಳಿಗೆ ಯುವತಿ ಮನೆಯವರಿಂದ ವಿರೋಧ ವ್ಯಕ್ತವಾಗಿದ್ದು ಬೆದರಿಕೆ ಹಾಕಲಾಗಿದೆ. ರಕ್ಷಣೆ ಕೋರಿ ನವದಂಪತಿ ಪೊಲೀಸರ ಮೊರೆ ಹೋಗಿದ್ದಾರೆ.
ಯಾದಗಿರಿ ಜಿಲ್ಲೆ ಸುರಪುರ ಪಾಳೇದಕೇರಿ ಓಣಿ ನಿವಾಸಿಗಳಾಗಿರುವ ತಿರುಪತಿ ಮತ್ತು ಸರಸ್ವತಿ ಮೂರು ವರ್ಷಗಳಿಂದ ಪ್ರೀತಿಸಿದ್ದು ಇವರ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ. ಜಾತಿ ಬೇರೆಯಾಗಿದ್ದ ಕಾರಣಕ್ಕೆ ಯುವತಿ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದು ಅಕ್ಟೋಬರ್ 16 ರಂದು ಮನೆ ಬಿಟ್ಟು ಹೋಗಿದ್ದ ಇಬ್ಬರು ಕಲ್ಬುರ್ಗಿ ಜಿಲ್ಲೆಯ ಸೇಡಂನಲ್ಲಿ ಮದುವೆಯಾಗಿದ್ದಾರೆ.
ಇದರಿಂದ ಆಕ್ರೋಶಗೊಂಡ ಯುವತಿಯ ಕುಟುಂಬದವರು ಯುವಕನ ಕುಟುಂಬದವರಿಗೆ ತೊಂದರೆ ನೀಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ತಮಗೆ ಹಾಗೂ ಕುಟುಂಬದವರಿಗೆ ಯುವತಿ ಮನೆಯವರಿಂದ ರಕ್ಷಣೆ ನೀಡಬೇಕೆಂದು ನವದಂಪತಿ ಯಾದಗಿರಿ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಿದ್ದಾರೆ. ಜಾತಿ ಬೇರೆಯಾಗಿರುವುದೇ ಮದುವೆಗೆ ವಿರೋಧಿಸಲು ಕಾರಣವಾಗಿದ್ದು ಜೀವ ಬೆದರಿಕೆ ಇರುವುದರಿಂದ ರಕ್ಷಣೆ ನೀಡಬೇಕೆಂದು ಕೋರಿದ್ದಾರೆ.