ಬೆಂಗಳೂರು: ಲಿವಿಂಗ್ ಟುಗೆದರ್ ನಲ್ಲಿದ್ದ ಪ್ರಿಯಕರ ಪ್ರೇಯಸಿ ಬೇರೆ ಯುವಕನನ್ನು ಮದುವೆಯಾಗಿದ್ದರಿಂದ ಆಕ್ರೋಶಗೊಂಡು ಖಾಸಗಿ ವಿಡಿಯೋ, ಫೋಟೋಗಳನ್ನು ಗಂಡನಿಗೆ ಕಳುಹಿಸಿ ಕಿರುಕುಳ ನೀಡಿದ್ದಾನೆ.
ಚಿಕ್ಕಮಗಳೂರು ಜಿಲ್ಲೆ ವಿಜಯಪುರದ ನಿವಾಸಿ ಖಾಸಗಿ ಕಂಪನಿ ನೌಕರ ಪೃಥ್ವಿ ಕಿರುಕುಳ ನೀಡಿದ ಆರೋಪಿ ಎಂದು ಹೇಳಲಾಗಿದೆ. ಕುಂದಲಹಳ್ಳಿಯ 27 ವರ್ಷದ ಸಂತ್ರಸ್ತೆ ವೈಟ್ಫೀಲ್ಡ್ ಸಿಇಎನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿ ಮತ್ತು ಸಂತ್ರಸ್ತೆ ಕೆಲವು ವರ್ಷಗಳ ಕಾಲ ಲಿವಿಂಗ್ ಟುಗೆದರ್ ನಲ್ಲಿದ್ದರು. ಆಕೆಯೊಂದಿಗೆ ಕಳೆದ ಖಾಸಗಿ ಕ್ಷಣಗಳ ವಿಡಿಯೋಗಳನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದ. ನಂತರದಲ್ಲಿ ಇಬ್ಬರ ನಡುವೆ ಮನಸ್ತಾಪವಾಗಿ ದೂರವಾಗಿದ್ದು ಆಕೆಯ ನಗ್ನ ವಿಡಿಯೋ ಮತ್ತು ಫೋಟೋಗಳನ್ನು ಬಳಸಿಕೊಂಡು ಮದುವೆ ನಿಲ್ಲಿಸಲು ಪ್ರಯತ್ನ ನಡೆಸಿದ್ದ. ಚಿಕ್ಕಮಗಳೂರು ಮಹಿಳಾ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಫೋಟೋ, ವಿಡಿಯೋ ಡಿಲಿಟ್ ಮಾಡಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಇದಾದ ನಂತರದಲ್ಲಿ ಆಕೆಗೆ ಮದುವೆಯಾಗಿದ್ದು ಈಗ ಗಂಡನಿಗೆ ಮತ್ತು ಮಾವನ ಮೊಬೈಲ್ ಗೆ ಬೆತ್ತಲೆ ಫೋಟೋ ವಿಡಿಯೋ ಕಳುಹಿಸಿ ಕಿರುಕುಳ ನೀಡಿ ಜೀವನ ಹಾಳು ಮಾಡಲು ಯತ್ನಿಸಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.